Ticker

6/recent/ticker-posts

ಕಾಡಾನೆಗಳ ರಕ್ಷಣೆಗೆ ಮೊದಲ ಆದ್ಯತೆ:ವನ್ಯಜೀವಿ ಸಂಶೋಧನೆಯ ವಿಜ್ಞಾನಿ ಪ್ರಾಚಿ ಮೆಹತಾ......

ಮುಂಡಗೋಡ: ಜಿಲ್ಲೆಯ ಸೀಮಿತ ಪ್ರದೇಶದಲ್ಲಿ ಸಣ್ಣ ಕುಟುಂಬದಂತೆ ಇರುವ ಕಾಡಾನೆಗಳ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಅದೇ ರೀತಿ ರೈತರ ತಮ್ಮ ಗದ್ದೆಯಲ್ಲಿ ಬೆಳೆದ ಬೆಳೆ ರಕ್ಷಣೆಗೂ ಕ್ರಮ ಕೈಗೊಳ್ಳಬೇಕು. ಈ ಮೂಲಕ ಆನೆ ಮಾನವ ಸಂಘರ್ಷ ಕಡಿಮೆ ಮಾಡಲು, ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಎಂದು ವನ್ಯಜೀವಿ ಸಂಶೋಧನೆ ಮತ್ತು ಸಂರಕ್ಷಣೆ ಸೊಸೈಟಿ ನಿರ್ದೇಶಕಿ ಹಾಗೂ ವಿಜ್ಞಾನಿ ಪ್ರಾಚಿ ಮೆಹತಾ ಹೇಳಿದರು.

ಆನೆಗಳ ಹಾಗೂ ಮಾನವ ಸಂಘರ್ಷ ಕಡಿಮೆ ಮಾಡುವ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ೨೦೧೦ ರಿಂದ ವಿವಿಧ ದೇಶಗಳನ್ನು ಸುತ್ತಿ ಕಳೆದ ೧೫ ವರ್ಷ ಗಳಿಂದ ಸಂಶೋಧನೆಯಲ್ಲಿ ತೊಡಗಿರುವ ಅವರು ಪಟ್ಟಣದ ಲೋಕೋಪಯೋಗಿ ಇಲಾಖೆಯ ಪರಿವಿಕ್ಷಣಾ ಮಂದಿರದಲ್ಲಿ ನ್ಯೂಸ್@ಮುಂಡಗೋಡದೊಂದಿಗೆ  ಜಿಲ್ಲೆಯಲ್ಲಿಯ ಆನೆಗಳ ಸಂಚಾರದ ಬಗ್ಗೆ ಹಾಗೂ ಅವುಗಳ ರಕ್ಷಣೆ ಬಗ್ಗೆ ಸಮಗ್ರ ಮಾಹಿತಿ ಹಂಚಿಕೊಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅರಣ್ಯದಲ್ಲಿ ಸುಮಾರು ೭೦ ಆನೆಗಳು ಇದ್ದು ಇಲ್ಲಿಯ ಅರಣ್ಯವು ಪ್ರದೇಶವು ಸಂಪದ್ಭರಿತವಾಗಿದ್ದು ದಟ್ಟವಾಗಿರುವುದರಿಂದ ಮಾರ್ಚನಿಂದ ಜುಲೈ ತಿಂಗಳುವರೆಗೆ ಮಾತ್ರ ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವಾಸವಿದ್ದು ಉಳಿದ ದಿನಗಳಲ್ಲಿ ಹಳಿಯಾಳ, ಯಲ್ಲಾಪುರ, ಮುಂಡಗೋಡ, ಶಿರಸಿ ತಾಲ್ಲೂಕುಗಳಲ್ಲಿ ಸಂಚಾರ ನಡೆಸುತ್ತವೆ. 

ಮನುಷ್ಯನ ಮೆದುಳಿಗಿಂತ ಮೂರು ಪಟ್ಟು ಹೆಚ್ಚು ಗಾತ್ರದಲ್ಲಿ ಆನೆಯ ಮೆದುಳು ಹೊಂದಿದ್ದು, ಬುದ್ಧಿವಂತ ಪ್ರಾಣಿಯಾಗಿದೆ. ಅತಿ ದೊಡ್ಡ ಪ್ರಾಣೆ ಆಗಿದ್ದರಿಂದ ಅದಕ್ಕೆ  ಒಂದು ಆನೆಗೆ ಪ್ರತಿ ದಿನ ೨೦೦ಕೆಜಿಯಷ್ಟು ಆಹಾರ ಹಾಗೂ ೧೫೦ಲೀಟರ್ ನೀರು ಬೇಕಾಗುತ್ತದೆ. ಪರಿವಾರದೊಂದಿಗೆ ಕಾಲ ಕಳೆಯುವ ಪ್ರಾಣೆ ಇದಾಗಿದ್ದು ತಂಡದ ಹಿರಿಯ ಆನೆಯ ಮಾರ್ಗದರ್ಶನದಲ್ಲಿ ಸಂಚಾರ ನಡೆಸುತ್ತವೆ. ಈಲ್ಲೆಯಲ್ಲಿ ೧೯೬೫ರಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣಗೊಂಡಿದ್ದರಿಂದ ಆನೆಗಳ ಪಥ ಬದಲಾವಣೆಗೊಂಡಿದೆ. 

ಆನೆಗಳು ಬಹಳ ಬುದ್ಧಿವಂತ ಇದ್ದು, ಹಿಂದೆ ಓಡಾಡಿದ ಮಾರ್ಗವನ್ನು ನೆನಪಿಸುತ್ತ ಅದೇ ಮಾರ್ಗದಲ್ಲಿ ಸಂಚರಿಸುವುದನ್ನು ಕಾಣಬಹುದಾಗಿದೆ. ಹೆಣ್ಣಾನೆಯು ತನ್ನ ಮರಿಗಳ ಸುರಕ್ಷತೆಗೆ ಆದ್ಯತೆ ನೀಡುತ್ತ, ಮಾನವ ವಾಸವಿರುವುದು ಗೊತ್ತಾದರೆ ತನ್ನ ಪಥವನ್ನು ಬದಲಿಸುತ್ತದೆ. ಆದರೆ, ಗಂಡಾನೆಯು ತನಗೆ ತೋಚಿದ ಮಾರ್ಗದಲ್ಲಿಯೇ ಸಂಚಾರ ನಡೆಸುತ್ತದೆ ಎಂದರು.
ಆನೆಗಳು ವಾಸಿಸುವ ಅರಣ್ಯ ಪ್ರದೇಶದ ಸುತ್ತಮುತ್ತ ತನಗೆ ಇಷ್ಟವಾದ ಕಬ್ಬು, ಭತ್ತ, ಬಾಳೆ ಬೆಳೆಯು ಸಿಗುವುದು ಒಂದು ಸಲ ಗೊತ್ತಾದರೆ, ಆ ಪ್ರದೇಶಕ್ಕೆ ನಿರಂತರ ಭೇಟಿ ನೀಡುತ್ತವೆ. ಯಾವ ಸಮಯದಲ್ಲಿ ಫಸಲು ಬರುತ್ತದೆ ಎಂಬುದನ್ನೂ ಗ್ರಹಿಸಿಕೊಂಡು ಆಹಾರಕ್ಕಾಗಿ ಸಂಚಾರ ನಡೆಸುತ್ತವೆ. ಹಗಲಿನಲ್ಲಿ ದಟ್ಟವಾದ ಅರಣ್ಯದಲ್ಲಿಯೇ ಬೀಡು ಬಿಡುವ ಆನೆಗಳು, ಸಂಜೆಯಾಗುತ್ತಲೇ ತೋಟ, ಗದ್ದೆಗಳಿಗೆ ಆಹಾರ ತಿನ್ನಲು ಬರುತ್ತವೆ. 
ಮೊದಲಿಗೆ ಇಲ್ಲಿ ಇನ್ನೂ ದಟ್ಟವಾದ ಅರಣ್ಯ ಪ್ರದೇಶವಿತ್ತು. ಈಗ ಅತಿಕ್ರಮಣ ಜಮೀನುಗಳಾಗಿವೆ. ಆದರಿಂದ ರೈತರ ಬೆಳೆಗಳ ರಕ್ಷಣೆಯೂ ಆಗಬೇಕು. ಅದೇ ರೀತಿ ಆನೆಗಳ ಸಂಚಾರಕ್ಕೆ ಅಡೆತಡೆಯೂ ಆಗಬಾರದು. ಹಳಿಯಾಳ, ಯಲ್ಲಾಪುರ, ಮುಂಡಗೋಡ, ಶಿರಸಿ ತಾಲ್ಲೂಕುಗಳ ವ್ಯಾಪ್ತಿಯ ೪೫ ಗ್ರಾಮಗಳಲ್ಲಿ ಆನೆಗಳ ಓಡಾಟ ದಾಖಲಾಗಿದೆ. ರೈತರ ಬೆಳೆ ರಕ್ಷಣೆಗೆ ತಮ್ಮ ಸೊಸೈಟಿ ವತಿಯಿಂದ ಕಡಿಮೆ ಖರ್ಚಿನ ಸಾಮಗ್ರಿಗಳನ್ನು ತಯಾರು ಮಾಡಲಾಗಿದೆ. ಆಫ್ರಿಕಾ ದೇಶದ ತಜ್ಞರ ಮಾಹಿತಿಯನ್ನೂ ಪಡೆದುಕೊಂಡು, ಆನೆಗಳು ಯಾವ ವಸ್ತು, ಶಬ್ಧಕ್ಕೆ ಹೆದರುತ್ತವೆ ಎಂಬುದನ್ನು ತಿಳಿದುಕೊಂಡು, ಅವುಗಳ ಆಧಾರದ ಮೇಲೆ ಆನೆಗಳನ್ನು ಓಡಿಸಲು ಪರಿಕರಗಳನ್ನು ತಯಾರಿಸಲಾಗಿದೆ. ಅದರಲ್ಲಿ  ಟ್ರಿಪ್ ಅಲಾರಾಮ, ಫಾರ್ಮ್ ಬೇಸಡ್ ಡಿಟೆಕ್ಡರ್ಸ್, ಪ್ರಾಣಿ, ಪಕ್ಷಿಗಳ ಶಬ್ಧ ಕೇಳಿಸುವ ಸೈರನ್ ಮುಖ್ಯವಾಗಿವೆ. ಇವುಗಳನ್ನು ಈಗಾಗಲೇ ರೈತರಿಗೆ ನೀಡಲಾಗಿದ್ದು, ಆನೆಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ಇವು ಸಹಕಾರಿಯಾಗಲಿವೆ ಎಂದರು.
 
ಉಪಯೋಗವಾಗದ ಅರಣ್ಯ ಇಲಾಖೆ ಯೋಜನೆ: ಆನೆ ಕಂದಕ ಹಾಗೂ ಸೋಲಾರ್ ತಂತಿಗಳನ್ನು ಅಳವಡಿಸಿ ಆನೆಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಮುಂದಾಗಿದೆ. ಆದರೆ, ಬುದ್ಧಿವಂತ ಆನೆಗಳು ಮಾತ್ರ ಕಂದಕದಲ್ಲಿ ಮಣ್ಣು ಹಾಕಿ ದಾಟುತ್ತವೆ ಹಾಗೂ ವಿದ್ಯುತ್ ತಂತಿಗಳು ಅಳವಡಿಸಿದರೆ ಅವುಗಳ ಮೇಲೆ ಮರಗಳನ್ನು ಕೆಡವಿ ತನ್ನ ದಂತದಿಂದ ತಂತಿಗಳನ್ನು ತೆಗೆದು ದಾಟಬಲ್ಲ ಪ್ರಾಣೆ ಇದಾಗಿದೆ.

ಟ್ರಿಪ್ ಅಲಾರಾಮ: ಇದನ್ನು ಮರದ ಮೇಲೆ ಅಳವಡಿಸಿ ದಾರದಿಂದ ಕಟ್ಟಲಾಗಿರುತ್ತದೆ. ದಾರಕ್ಕೆ ಕಾಡು ಪ್ರಾಣೆಗಳು ಟಚ್ ಮಾಡುವುದರಿಂದ ಅಲಾರಾಂ ಶಬ್ಧ ಕೇಳಿಸುತ್ತದೆ. ಇದರಿಂದ ಆನೆಯು ಹೆದರಿ ಪಥ ಬದಲಿಸುತ್ತದೆ. 

ಫಾರ್ಮ್ ಬೇಸಡ್ ಡಿಟೆಕ್ಡರ್ಸ್: ಆಕಳು ಸೆಗಣಿ, ಮೆಣಸಿಕಾಯಿ, ತಂಬಾಕು ಹಾಕಿ ಮಿಶ್ರಣವನ್ನು ಒಣಗಿಸಿ ಅದನ್ನು ಆನೆ ಬರುವ ದಾರಿಯಲ್ಲಿ, ಗದ್ದೆಯ ಸುತ್ತಲೂ ಬೆಂಕಿ ಹಚ್ಚಿ ಇಡುವುದರಿಂದ ಆನೆಗೆ ಘಾಟದ ವಾಸನೆ ತಗುಲಿ ಆನೆ ಬರುವುದನ್ನು ತಡೆಗಟ್ಟಬಹುದು. 

ಫ್ಲಿಕರ್ ಲೈಟ್: ಇದರಲ್ಲಿ ಸೋಲಾರ ಅಳವಡಿಸಕಾಗಿದ್ದು, ಸಂಜೆಯಾಗುತ್ತಲೇ ಫ್ಲಿಕರ್ ಲೈಟ್‌ನಲ್ಲಿ  ಎರಡು ಬಣ್ಣದ ಬೆಳಕು ಹೊಳೆಯುತ್ತದೆ. ಲೈಟ್ ಮಿನುಗುಗುದನ್ನು ನೋಡಿ ಆನೆಯು ಅಲ್ಲಿ ಯಾರೋ ಮನುಷ್ಯರು ಇರಬಹುದು ಎಂದುಕೊಂಡು ತನ್ನ ಮಾರ್ಗವನ್ನು ಬದಲಿಸಬಹುದು. 

ಸೈರನ್ ಮೈಕ್: ಈ ಸಾಧನದಲ್ಲಿ ವಿವಿಧ ಪ್ರಾಣಿ, ಪಕ್ಷಿಗಳ ಹಾಗು ಮನುಷ್ಯರ ಶಬ್ಧಗಳನ್ನು ರೆಕಾರ್ಡ್ ಮಾಡಿ ಸೈರನ್ ನಲ್ಲಿ ಅಳವಡಿಸಲಾಗಿರುತ್ತದೆ. ಸೈರನ್ ಶಬ್ಧ ಮೊಳಗುತ್ತಿದ್ದಂತೆ ಆನೆಗಳು ಆ ಜಾಗಕ್ಕೆ ಬರಲು ಹಿಂದೇಟು ಹಾಕುತ್ತವೆ.
 ವನ್ಯಜೀವಿ ಸಂಶೋಧನೆ ಮತ್ತು ಸಂರಕ್ಷಣೆ ಸೊಸೈಟಿ ತಂಡದ ರವಿ ಯಲ್ಲಾಪುರ, ಫ್ರಾನ್ಸಿಸ್ ಆಜಿಂಕ್ಯ, ಭಾವುಕ ಈ ಸಂದರ್ಭದಲ್ಲಿ ಉಪಸ್ಥತರಿದ್ದರು.