2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ಮುಕ್ತಾಯಗೊಂಡ ವಹಿವಾಟಿನಲ್ಲಿ ಮಾರ್ಕೆಟಿಂಗ್ ಸೊಸೈಟಿಯು ಒಟ್ಟು 1.20ಕೋಟಿ ರೂಪಾಯಿ ವಹಿವಾಟು ನಡೆಸಿದೆ. ಆದರೆ, 1.37 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈ ಮೂಲಕ ಬರೋಬ್ಬರಿ 17 ಲಕ್ಷ ರೂಪಾಯಿ ಹಾನಿ ಅನುಭವಿಸಿದೆ. ಕಳೆದ ನಾಲ್ಕೈದು ವರ್ಷಗಳಿಂದ ನಷ್ಟದಲ್ಲಿಯೇ ಸಾಗಿರುವ ಮಾರ್ಕೆಟಿಂಗ್ ಸೊಸೈಟಿಯನ್ನು ಪುನಶ್ಚೇತನಗೊಳಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ ಎಂದು ರೈತರು ಆಗ್ರಹಿಸಿದ್ದಾರೆ.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಈಗಾಗಲೇ ಸಣ್ಣದಾಗಿ ವ್ಯಾಪಾರ ಆರಂಭಿಸಿ, ರೈತರನ್ನು ಆಕರ್ಷಿಸುತ್ತಿರುವ ಶಿರಸಿಯ ದೈತ್ಯ ಸಹಕಾರಿ ಸಂಘವಾಗಿರುವ ಟಿಎಸ್‌ಎಸ್ ತನ್ನ ವ್ಯಾಪಾರ ಕ್ಷೇತ್ರವನ್ನು ವಿಸ್ತರಿಸಿಕೊಳ್ಳಲು ಹಗಲಿರುಳು ಶ್ರಮಿಸುತ್ತಿದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಕೆಲವು ವರ್ಷಗಳಿಂದ ಈ ಮಾರ್ಕೆಟಿಂಗ್ ಸೊಸೈಟಿ ನಷ್ಟದತ್ತ ಸಾಗಿದೆ. ತಾಲೂಕಿನ ಹಿರಿಯ ಸಹಕಾರಿ ಧುರಿಣರ ಕನಸಿನ ಸೌಧವಾಗಿರುವ ಮಾರ್ಕೆಟಿಂಗ್ ಸೊಸೈಟಿಗೆ ಕಾಯಕಲ್ಪ ನೀಡುವ ಕೆಲಸವನ್ನು ಮಾಡಬೇಕಿದೆ. ಇಲ್ಲವಾದರೆ, ದೂರದೃಷ್ಟಿಯ ಕೊರತೆ ಹಾಗೂ ಟಿಎಸ್‌ಎಸ್ ಹೊಡೆತಕ್ಕೆ ನಲುಗಿ ಮಾರ್ಕೆಟಿಂಗ್ ಸೊಸೈಟಿ ಮುಚ್ಚುವ ಸ್ಥಿತಿ ತಲುಪಿದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಸಹಕಾರಿ ಧುರಿಣರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಲಾಭದತ್ತ ತರಲು...
ಮುಂಡಗೋಡದ ಮಾರ್ಕೆಟಿಂಗ್ ಸೊಸೈಟಿಯನ್ನು ಲಾಭದತ್ತ ತರಲು ಎರಡು ವರ್ಷಗಳ ಹಿಂದೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಪಣ ತೊಟ್ಟಿದ್ದರು. ಮಾರ್ಕೆಟಿಂಗ್ ಸೊಸೈಟಿಯಲ್ಲಿ ಇರುವ ನಷ್ಟವನ್ನು ಸರಿದೂಗಿಸಲು ಮೊದಲ ಆದ್ಯತೆ ನೀಡಿದ್ದರು. ಅಲ್ಲದೇ ತಮ್ಮ ಆಪ್ತವಲಯದಲ್ಲಿ ಇರುವ, ಪ್ರಭಾವಿ ರಾಜಕಾರಣಿಯೂ ಆಗಿರುವ ಜಿ.ಪಂ.ಮಾಜಿ ಸದಸ್ಯ ರವಿಗೌಡ ಪಾಟೀಲ ಅವರನ್ನು ನಾಮನಿರ್ಧೇಶಿತ ಸದಸ್ಯನನ್ನಾಗಿ ಮಾಡಿ, ಇದೇ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಮಳಿಗೆಗಳ ವಿಸ್ತಾರ ಮಾಡಿ, ಗ್ರಾಹಕರಿಗೆ ಅನುಕೂಲ ಮಾಡಲು ಮುಂದಾಗಿದ್ದರೂ, ಪ್ರ.ವ್ಯವಸ್ಥಾಪಕರನ್ನು ಆಯ್ಕೆ ಮಾಡುವಾಗ ಎಡವಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಕಾಲ ಮಿಂಚುವ ಮುನ್ನವೇ ಮಾರ್ಕೆಟಿಂಗ್ ಸೊಸೈಟಿಯನ್ನು ಎತ್ತಿ ಹಿಡಿಯುವಂತ ಕೆಲಸ ಆಗಬೇಕಾಗಿದೆ.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು