ಮುಂಡಗೋಡದಲ್ಲಿ ಬುಧವಾರ ಇಬ್ಬರಿಗೆ ಕೋವಿಡ್ ಸೋಂಕು ತಗುಲಿದೆ. ಮುಂಡಗೋಡದ ತಾಲೂಕು ಆಸ್ಪತ್ರೆಯ ಸಿಬ್ಬಂದಿ ಒಬ್ಬರು ಹಾಗೂ ಕ್ಯಾಸನಕೇರಿ ಗ್ರಾಮದ ಒಬ್ಬರಿಗೆ ಕೋವಿಡ್ ಪಾಸಿಟಿವ್ ಬಂದಿದೆ.ಇದರಿಂದ ಇಲ್ಲಿಯವರೆಗೆ ಒಟ್ಟು 11 ಜನರು ಕೋವಿಡ್ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟಿಬೇಟಿಯನ್ ಕ್ಯಾಂಪ್‌ನಲ್ಲಿ ನಾಲ್ಕು ಜನರು ಕೋವಿಡ್ ಪಾಸಿಟಿವ್ ಆಗಿ ಗಜಾಂಗ್ ಗೆಸ್ಟ್ ಹೌಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ, ಮುಂಡಗೋಡ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಸೋಂಕು ದೃಢಪಟ್ಟವರು, ಮನೆಯಲ್ಲಿಯೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತಷ್ಟು ಏರಿಕೆ ಆಗುವ ಸಾಧ್ಯತೆ:
ತಾಲೂಕಿನ ಕೆಲವು ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆ ಮಾಡಿ, ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಾಯಕ್ಕೆ ಕಳಿಸಲಾಗಿದೆ. ವಿದ್ಯಾರ್ಥಿಗಳ ಕೋವಿಡ್ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಇದಲ್ಲದೇ, ದೂರದ ಊರುಗಳಿಗೆ ಹೋಗಿ ಬಂದಿರುವರು, ಶಬರಿಮಲೆ ಯಾತ್ರೆ ಮುಗಿಸಿ ಈಗಾಗಲೇ ಮರಳಿ ಬಂದವರು ಹಾಗೂ ಸಂಕ್ರಾಂತಿ ನಂತರ ಮರಳಿ ಬರುವರು, ಸೇರಿದಂತೆ ಹಲವು ಜನರ ಕೋವಿಡ್ ಪರೀಕ್ಷೆ ಮಾಡುವ ಸಾಧ್ಯತೆ ಇದೆ. ಇದೆಲ್ಲದರಿಂದ, ಕೋವಿಡ್ ಪಾಸಿಟಿವ್ ಕೇಸ್‌ಗಳಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.
ಬೆಂಗಳೂರಿನಿಂದ ಬಂದವರು ಟೆಸ್ಟ್ ಮಾಡಿಸಿಕೊಳ್ಳಲಿ;
ಓಮಿಕ್ರಾನ್ ಆತಂಕ ದಿನೇ ದಿನೇ ಹೆಚ್ಚಾಗುತ್ತಿದ್ದು, ಹೊರ ರಾಜ್ಯ, ಜಿಲ್ಲೆಗಳಿಗೆ ಸಂಚಾರ ಮಾಡಿರುವರು ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಬೆಂಗಳೂರಿಗೆ ಹೋಗಿ ಬಂದವರೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ, ರಾಜಧಾನಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಏರತೊಡಗಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಜವಾಬ್ದಾರಿಯುತ ನಾಗರಿಕನ ಕರ್ತವ್ಯವಾಗಿದೆ ಎಂದು ತಾಲೂಕು ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ಎಚ್.ಎಫ್.ಇಂಗಳೆ ತಿಳಿಸಿದ್ದಾರೆ.
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು