Ticker

6/recent/ticker-posts

ಮುಂಡಗೋಡದ ಯುವತಿಯ ರಾಷ್ಟ್ರಮಟ್ಟದ ಸಾಧನೆ..!!!


ಮುಂಡಗೋಡ: ತಾಲೂಕಿನ ಪುಟ್ಟ ಗ್ರಾಮ ಚಳಗೇರಿಯ ಧನಗರ ಗೌಳಿ ಕುಟುಂಬದ ಯುವತಿಯೊಬ್ಬರು ರಾಷ್ಟ್ರ ಮಟ್ಟದ ಅಥ್ಲೆಟಿಕ್ಸನಲ್ಲಿ ಮಿಂಚಿ 18ವರ್ಷದ ವಯೋಮಿತಿಯಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿದ ಏಕೈಕ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.   

ಹೌದು, ಚಳಗೇರಿಯ ನಯನಾ ಕೊಕರೆ ಆ ಯುವತಿ. ಪ್ರಸ್ತುತ ಮುಂಡಗೋಡದ ಜೂನಿಯರ್ ಕಾಲೇಜ್‌ನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾರೆ. ಇಲ್ಲಿನ ಬ್ರಿಜಸ್ ಆಫ್ ಸ್ಟೋರ್ಟ್ಸನಿಂದ ತರಬೇತಿ ಪಡೆದ ನಯನಾ ಇದೇ ತಿಂಗಳು ಅಕ್ಟೋಬರ್ 11ರಂದು ದೆಹಲಿಯ ಜವಾಹರಲಾಲ ನೆಹರು ಕ್ರೀಡಾಂಗಣದಲ್ಲಿ ನಡೆದ 3ನೇ ನ್ಯಾಷನಲ್ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿ 400ಮೀಟರ್ ಓಟದ ಸ್ಫರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯ ಮತ್ತು ತಾಲೂಕಿನ ಕೀರ್ತಿ ಪತಾಕೆ ಹಾರಿಸಿದ್ದಾರೆ. 


ದಟ್ಟ ಅಡವಿಯಲ್ಲಿ ವಾಸಿಸುವ ದನಗರ ಗೌಳಿ ಸಮುದಾಯದ ಗಂಗಾರಾಮ ಕೊಕರೆ ಮತ್ತು ಗಂಗುಬಾಯಿ ದಂಪತಿಯ ಪುತ್ರಿ ನಯನಾ. ಅವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ತಮ್ಮ ಗ್ರಾಮ ಚಳಗೇರಿಯಲ್ಲಿ ಮುಗಿಸಿದರು. ಕಾತೂರಿನ ಪ್ರೌಢಶಾಲೆಯಲ್ಲಿ 8 ಮತ್ತು 9ನೇ ತರಗತಿವರೆಗೆ ವ್ಯಾಸಂಗ ಮಾಡಿ ನಂತರ ಲೊಯೋಲ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.ಯನ್ನು ಮುಗಿಸಿದರು. 7ನೇ ತರಗತಿಯಲ್ಲಿದ್ದಾಗ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ 100ಮೀ., 200ಮೀ., ಮತ್ತು 400ಮೀ. ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. 10ನೇ ತರಗತಿಯಲ್ಲಿ ಓದುತ್ತಿರುವಾಗ ರಾಜ್ಯ ಮಟ್ಟದ ಅಥ್ಲೆಟಿಕ್ಸನಲ್ಲಿ ಭಾಗವಹಿಸಿ 4ನೇ ಸ್ಥಾನ ಪಡೆದಿದ್ದಾರೆ. ಬಾಲ್ಯದಿಂದಲೂ ಅಥ್ಲೆಟಿಕ್ಸನಲ್ಲಿ ತುಂಬಾ ಆಸಕ್ತಿ ಹೊಂದಿದ ನಯನಾ ಅವರಿಗೆ, ಆಕೆಯ ತಂದೆ-ತಾಯಿ ಕಷ್ಟದಲ್ಲಿಯೂ  ಪ್ರೋತ್ಸಾಹಿಸುತ್ತಿದ್ದಾರೆ. 

" ಕಳೆದ ಮೂರು ವರ್ಷಗಳಿಂದ ಬ್ರಿಜಸ್ ಆಫ್ ಸ್ಟೋರ್ಟ್ಸನಿಂದ ಅಥ್ಲೆಟಿಕ್ ತರಬೇತಿ ಪಡೆಯುತ್ತಿದ್ದೇನೆ.  ತಾಲೂಕಿನಲ್ಲಿ ಬಹಳಷ್ಟು ಕ್ರೀಡಾಪಟುಗಳು ಇದ್ದಾರೆ. ಅದರಲ್ಲಿಯೂ ಚೆನ್ನಾಗಿ ಸಾಧನೆ ಮಾಡಬಲ್ಲ ಹಲವು ಪ್ರತಿಭೆಗಳು ಇದ್ದಾರೆ. ಉತ್ತಮ ಅಭ್ಯಾಸಕ್ಕಾಗಿ ತಾಲೂಕಿನ ಕ್ರೀಡಾಂಗಣದ ಟ್ರ್ಯಾಕ್ ಸರಿಪಡಿಸಿದರೆ ಇನ್ನೂ ಹೆಚ್ಚಿನ ಪ್ರತಿಭೆಗಳು ಸಾಧನೆ ಮಾಡಲು ಅನುಕೂಲವಾಗುತ್ತದೆ. ಮುಂಬರುವ ಒಲಂಪಿಕ್ಸಗಾಗಿ ಹೆಚ್ಚಿನ ತರಬೇತಿ ಪಡೆದು ಗುರಿ ಮುಟ್ಟುವ ಪ್ರಯತ್ನ ಮಾಡುತ್ತೇನೆ"-ಎಂದು ಅಥ್ಲೀಟ್ ನಯನಾ ಕೊಕರೆ ಹೇಳಿದರು.