ಮುಂಡಗೋಡ:ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಏಕವ್ಯಕ್ತಿಯ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ವಾರ ಕಳೆಯುತ್ತಿದೆ. ಸಂಪುಟಕ್ಕೆ ಸೇರಲು ಹಲವರು ತಾಮುಂದು, ನಾ ಮುಂದು ಎನ್ನುತ್ತ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಗಂಟೆಗೊಮ್ಮೆ ಸಚಿವರು ಇವರಾಗುತ್ತಾರೆ, ಅವರಾಗುತ್ತಾರೆ, ಇವರನ್ನು ಕೈಬಿಡುತ್ತಾರೆ..ಎಂದೆಲ್ಲ ಸುದ್ದಿಗಳನ್ನು ನೋಡಿ ನೋಡಿ ಜನರಿಗೂ ಸಾಕಾಗಿದೆ. ಅಷ್ಟರಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಸೋಮವಾರ ಬೆಳಿಗ್ಗೆಯಿಂದ 'ಸಂಭಾವ್ಯ ಸಚಿವರು'...ಎಂಬ ಪಟ್ಟಿಯನ್ನು ಹರಿಯಬಿಡಲಾಗಿದೆ. ಈ ಪಟ್ಟಿಯಲ್ಲಿ ತಮಗಿಷ್ಟವಾದ ನಾಯಕರನ್ನು ಮಂತ್ರಿ ಮಾಡಿದ್ದಾರೆ. ಬಿಜೆಪಿ ಪಕ್ಷದ ವಾಟ್ಸಪ್ ಗುಂಪುಗಳಲ್ಲಿ ಈ ಪಟ್ಟಿ ಸಾಕಷ್ಟು ಹರಿದಾಡಿದೆ. ಪಟ್ಟಿಯನ್ನು ನೋಡಿ, ಸತ್ಯವೋ, ಸುಳ್ಳೋ, ಎಂದು ತಿಳಿಯದೇ, ಹಲವರು ಸಿಕ್ಕಸಿಕ್ಕವರಿಗೆ ಫಾರ್ವಡ್ ಮಾಡಿದ್ದಾರೆ. ಪಟ್ಟಿಯಲ್ಲಿರುವ ಮುಖ್ಯಮಂತ್ರಿಯ ಹೆಸರನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಿಡಿಗೇಡಿಗಳ ಕುಚೇಷ್ಟೇ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಏಕೆಂದರೆ, ಈ ಪಟ್ಟಿಯಲ್ಲಿರುವ ಮುಖ್ಯಮಂತ್ರಿಯ ಹೆಸರು ಎಸ್.ಆರ್.ಬೊಮ್ಮಾಯಿ ಎಂದಾಗಿದೆ. ಅಸಲಿಗೆ, ದಿ.ಎಸ್.ಆರ್.ಬೊಮ್ಮಾಯಿ ಅವರ ಮಗ ಬಸವರಾಜ ಬೊಮ್ಮಾಯಿ ಈಗಿನ ಮುಖ್ಯಮಂತ್ರಿ ಎಂಬುದು ಸುಳ್ಳು ಸುದ್ದಿ ಹಬ್ಬಿಸುವರಿಗೆ ಗೊತ್ತಾಗಿರಲಿಕ್ಕಿಲ್ಲ..!
ಸಂಭಾವ್ಯ ಪಟ್ಟಿಯಲ್ಲಿ ಉತ್ತರ ಕನ್ನಡಕ್ಕಿಲ್ಲ ಸ್ಥಾನ..!!
ಸೋಮವಾರ ಹರಿದಾಡಿದ ಸಂಭಾವ್ಯ ಪಟ್ಟಿಯಲ್ಲಿ ಉತ್ತರಕನ್ನಡಕ್ಕೆ ಸ್ಥಾನ ಲಭಿಸಿಲ್ಲದಿರುವುದು ಅಚ್ಚರಿ ಮೂಡಿಸಿದೆ. ಜಿಲ್ಲೆಯಲ್ಲಿ ೫ ಜನ ಬಿಜೆಪಿ ಶಾಸಕರಿದ್ದಾರೆ. ಅಲ್ಲದೇ, ಲಾಕ್‌ಡೌನ್ ಸಮಯದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ, ಕ್ಷೇತ್ರ ಹಾಗೂ ರಾಜ್ಯದ ತುಂಬ ಓಡಾಡಿ, ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿರುವ, ನಿಜವಾದ ಜನನಾಯಕ ಎಂದು ಸಾಮಾನ್ಯ ಜನರಿಂದಲೇ ಬಿರುದು ಪಡೆದುಕೊಂಡಿರುವ ಮಾಜಿ ಸಚಿವ ಹಾಗೂ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಇದ್ದಾರೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯೂ ಹೌದು. ಅವರ ಹೆಸರನ್ನೇ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಕಿಡಿಗೇಡಿಗಳು ಕಾಣಿಸಿಲ್ಲ. ಪಟ್ಟಿಯನ್ನು ನೋಡಿದ ಬಿಜೆಪಿ ಕಾರ್ಯಕರ್ತರು, ಇದೊಂದು ಸುಳ್ಳು ಸುದ್ದಿ, ಇದನ್ನು ಯಾರೂ ನಂಬಬಾರದು ಎಂದು ಸ್ವತಹ ಬಿಜೆಪಿ ಮುಖಂಡರೇ, ಸಾಮಾಜಿಕ ತಾಣದಲ್ಲಿ ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಮಾಡಲು ಏನೂ ಕೆಲಸವಿಲ್ಲದವರು, ತಮಗೆ ತಿಳಿದಂತೆ ಪಟ್ಟಿ ಮಾಡಿ ಹರಿಯಬಿಟ್ಟಿದ್ದಾರೆ. ಅದನ್ನು ಓದಿದ ಕೆಲವರು, ಸತ್ಯಸುಳ್ಳಿನ ಪರಾಮರ್ಶೆ ನಡೆಸದೇ, ಮತ್ತಷ್ಟು ಮಂದಿಗೆ ಕಳಿಸಿದ್ದಾರೆ. ಅತ್ತ ಸೋಮವಾರ ತಡರಾತ್ರಿವರೆಗೆ ದಿಲ್ಲಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದಾರೆ.

ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು