Ticker

6/recent/ticker-posts

ಅಸಲಿಗೆ ನಮ್ಮಿಡೀ ಸಂಸ್ಕೃತಿಯೇ ನಾಗನ ಋಣದಲ್ಲಿದೆ.

ನಾಗದೇವರೆಂದರೆ ನಮಗೆ ಯಾವುದೋ ಮಹಾನ್ ಶಕ್ತಿಗಿಂತ ಹಿರಿಯಣ್ಣನ ಕಂಡ ಭಾವ!

ಕಾರಣ ಭಾರತದ ಯಾವುದೇ ದೇವರನ್ನು ತೆಗೆದುಕೊಳ್ಳಿ ಅಲ್ಲಿ ನಾಗನ ಸ್ಥಾನ ಇದ್ದೇ ಇದೆ; ಅಷ್ಟೇ ಅಲ್ಲ ನಮ್ಮ ಮನೆಯ ಅಂಗಳದಲ್ಲಿ, ಮನೆಯ ಒಳಗೆ ಪ್ರತಿ ಕಾರ್ಯಗಳಲ್ಲಿ ನಾಗನು ತನ್ನ ಅಸ್ತಿತ್ವವನ್ನು ಮೂಡಿಸಿ ಬಿಟ್ಟಿದ್ದಾನೆ.
ಅಸಲಿಗೆ ನಮ್ಮಿಡೀ ಸಂಸ್ಕೃತಿಯೇ ನಾಗನ ಋಣದಲ್ಲಿದೆ.
ಅದರಲ್ಲೂ ಕರಾವಳಿ ಜಿಲ್ಲೆಯ ನಾಗರಿಕತೆಯನ್ನು ನಾಗರ"ಕಥೆ" ಎನ್ನಬಹುದು!

ಜನಮೇಜಯನು ಉರಿಗಣ್ಣಿನಿಂದ ಸರ್ಪಯಾಗ ಮಾಡಿದಾಗ ಜರತ್ಕಾರು-ಜರತ್ಕಾರುಗಳ ಮಗನಾದ ಅರ್ಧ ಮನುಷ್ಯ-ಅರ್ಧ ನಾಗನ ಗುಣಗಳನ್ನು ಹೊಂದಿದ್ದ "ಆಸ್ತೀಕ"ನು ಇಂದು ಸರ್ಪಗಳ ಆಹುತಿಯನ್ನು ತಡೆದುದ್ದರ ಪ್ರತೀಕ ಈ ನಾಗರ ಪಂಚಮಿ.
ನಮ್ಮಲ್ಲಿ ಇರುವ ಎಲ್ಲ ಪುರಾಣಕಥೆಗಳನ್ನು ನೋಡಿದಾಗ ಶಿವ,ಗಣೇಶ, ನಾಗ ಸಂಕುಲದೆಲ್ಲ ನಾವು ಹುಟ್ಟನ್ನಲ್ಲ,ಮರುಹುಟ್ಟನ್ನ ಸಂಭ್ರಮಿಸುತ್ತೇವೆ!
ಅದೊಂದು ವಿಶೇಷವೂ; ಹಿರಿಯರು ನಮಗೆ ದೇವ-ಜೀವರ ಸಂಬಂಧವನ್ನು ಲೌಕಿಕವಾಗಿ ಮನೆಯ ಸಂಬಂಧಗಳಷ್ಟೇ ಸಂಭ್ರಮಿಸಿ ಅವುಗಳನ್ನು ಮಾನಸಿಕ ಮಡಿಗಳಿಂದ ದೂರ ಮಾಡಿ ಮನಸಿಗೆ ಹತ್ತಿರವಾಗಿಸಿಕೊಂಡ ಉದಾತ್ತ ಚಿಂತನೆಯೂ ಅಡಕವಾಗಿದೆ.

ದೇವ-ದಾನವರಿಗೆ ನಿಸ್ವಾರ್ಥವಾಗಿ ಸಹಾಯ ಮಾಡಿದ ವಾಸುಕಿಯ ಕಥೆ ಕೇಳಿದ್ದೀರಲ್ಲ! ಕದ್ರು-ಕಷ್ಯಪರ ಅಗ್ರಪುತ್ರನಾದ ಆತನ ಋಣದಲ್ಲಿ ಇಡೀ ಕರಾವಳಿ ಇದೆ!

ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ
ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ
ಏತಾನಿ ನವನಾಮಾನಿ ನಾಗಾನಾಂ ಚ ಮಹಾತ್ಮನಂ
ಸಾಯಂಕಾಲೇ ಪಠೇನಿತ್ಯ ಪ್ರಾತಃಕಾಲೇ ವಿಶೇಷತಃ
ತಸ್ಮೈ ವಿಷಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್.

ಎಂದು ನವನಾಗರನ್ನು ಸ್ಮರಿಸಿ ಅವರ ವರದಿಂದ ವಿಷಭಯವು ಬರದೇ ಇರಲಿ, ಎಲ್ಲದರಲ್ಲೂ ವಿಜಯ ಸಿಗಲಿ ಎಂದು ವೈದಿಕ ಸಾಹಿತ್ಯದ ಮಂತ್ರಗಳು ಹಾರೈಸುತ್ತವೆ. 

"ಸುಷುಮ್ನಾ ನಾಡಿ ಮಧ್ಯ ಸಂಸ್ಥಿತಾಯ ನಮಃ" ಎಂದು ನಾಗ ಅಷ್ಟೋತ್ತರದ 106 ನೇ ಮಂತ್ರ ಹೇಳುತ್ತದೆ.
ಇದು ಹೊರಗಡೆ ಅಲ್ಲ ಒಳಗಡೆಯೇ ನಾಗನನ್ನು ಕಂಡುಕೊಳ್ಳುವ ವಿಧಾನವಾಗಿದೆ.

ಕರಾವಳಿಯುದ್ದಕ್ಕೂ ಇರುವಂತಹ ಎಲ್ಲ ರೀತಿಯ ನಾಗಬನಗಳು ಸಂಸ್ಕೃತಿಯ/ಪ್ರಕೃತಿಯ  ಉತ್ಥಾನ ಮಾಡಿದ ಪುಣ್ಯ ಕಟ್ಟಿಕೊಂಡಿವೆ. ಈ ನೆಲದ ಮೂಲದವರಾದ ಕೊರಗರು,ಮೊಗವೀರರು,ಬಂಟ,ಈಡಿಗರೆಲ್ಲ ಸ್ವಲ್ಪವಾದರೂ ಜಾಗವನ್ನು ನಾಗನಿಗೆ ಬಿಟ್ಟುಕೊಡುತ್ತಿದ್ದರು.
ಇದೆಂತಹ ಉದಾತ್ತ ಚಿಂತನೆ ಗೊತ್ತಾ? ಇದೆಲ್ಲ ನಿನ್ನದೇ ಸ್ಥಾನ ನಿನ್ನ ಸ್ಥಾನದಲ್ಲಿ ನಾವಿದ್ದೇವೆ, ಅದಕ್ಕಾಗಿ ನಿನಗೂ ನೆಲೆ ಕೊಡುತ್ತಿದ್ದೇವೆ ಎಂದು ನಾವು ದೈವಗಳೊಡನೆ ಮಾಡಿಕೊಂಡ ಒಪ್ಪಂದ ಅದು ಬಯಲು ಸೀಮೆಗೂ ವ್ಯಾಪಿಸಿ ನಾಗರಾಜನು ಅರಳಿಕಟ್ಟೆಯ ಮೇಲೆ ಕುಳಿತು ಅದೆಷ್ಟು ಜನ ಹಿರಿಯರ ಹಿಂಡಿನ ವಾರ್ತಾಲಾಪವನ್ನು ಎಲ್ಲರ ಹಿರಿಯಣ್ಣನಾಗಿ ಆಲಿಸುತ್ತಿದ್ದನೋ?!

ಈಗಿನ ಕುಕ್ಕೆಯೂ ಕೂಡ ಮಲೆಕುಡಿಯ ಬುಡಕಟ್ಟು ಜನಾಂಗ ಆರಾಧಿಸುತ್ತಿದ್ದ ಪುರಾತನ ನಾಗಸ್ಥಾನ!
ಇಂದಿಗೂ ಅಲ್ಲಿ ಶಿವಸುತ ಸುಬ್ರಹ್ಮಣ್ಯನು ಅಲ್ಲಿ ನಾಗನೊಡನೆ ಒಂದಾಗಿ ಬಂದ ಜನರನ್ನು ಹರಸುತ್ತಿದ್ದಾನೆ!

ಅದಕ್ಕೆ ಅವನನ್ನು "ಹೇ ಸ್ವಾಮಿನಾಥ ಕರುಣಾಕರ ದೀನಬಂಧೋ ಶ್ರೀ ಪಾರ್ವತೀಶ ಮುಖಪಂಕಜ  ಪದ್ಮಬಂಧೋ ಶ್ರೀಶಾದಿ ದೇವಗಣಪೂಜಿತ ಪದ್ಮಪಾದ ವಲ್ಲೀಶನಾಥ ಮಮದೇಹಿ ಕರಾವಲಂಬಮ್" ಎಂದು ಜನರು ತಮ್ಮ ಸಂಕಷ್ಟಗಳನ್ನು ಕಳಿಯೆಂದು ಕರಚಾಚಿ ವರ ಪಡೆದು ಸಾಗುತ್ತಾರೆ.

ತುಳುನಾಡಿನ ಈ ಹಿರಿಯಣ್ಣ ಶಾಸ್ತ್ರಕ್ಕಿಂತಲೂ ಹೆಚ್ಚಾಗಿ ತನು-ತಂಬಿಲಗಳ ಸೇವೆಗೆ ಒಲಿಯುವುದು ಜಾಸ್ತಿ.
(ಜ್ಯೋತಿಷ್ಯದ ಪ್ರಕಾರವೂ ಕುಜನಿಗೆ ಅಭಿಮಾನಿಯಾದ ಸ್ಕಂದನಾಗಿದ್ದನೆ, ಕುಜ-ಸಹೋದರ ಸಂಬಂಧ ಸೂಚಕ ಗ್ರಹ)

ದಕ್ಷಿಣ ಕರ್ನಾಟಕದಲ್ಲೂ ಮುನಿಯಪ್ಪನಾಗಿ ಪೂಜಿಸಲ್ಪಡುವ ನಾಗರಾಜ ರೈತರ ಹೊಲದಲ್ಲಿ ಹರಡುವ ರಾಗಿಯನ್ನು ಅಳತೆ ಮಾಡಿ ಸಾಗುತ್ತಾನೆ, ನಮ್ಮದು ಎಷ್ಟು ವಿಶಿಷ್ಟ ,ಶ್ರೀಮಂತ ಸಂಸ್ಕೃತಿ ನೋಡಿ ಇಲ್ಲಿ ಹಾಲು/ಎಳನೀರಿನ ಅಭಿಷೇಕವನ್ನು ಸ್ವೀಕರಿಸುವ ನಾಗರಾಜ ಅಲ್ಲಿ ಮರಿ ಹೊಡೆದು ಮಾಡುವ ಬಾಡಿಗೆ ಕೂಡ ಪ್ರಸನ್ನನಾಗುತ್ತಾನೆ.

ಉತ್ತರ ಕರ್ನಾಟಕದಲ್ಲಿ ಇದು ಹೆಂಗಳೆಯರ ಹಬ್ಬ, ತವರನ್ನು ಸೇರುವ ಹೆಂಗಸರು ಉಂಡಿ-ಉಸುಳಿ ಮಾಡಿ ಹಾಲೆರೆದು ಹಿರಿಯರಿಗೆ ನಮಿಸಿ, ಕಿರಿಯರಿಗೆ ಹರಸಿ ಸಂಭ್ರಮಿಸುವ ಉದಾತ್ತ ಮಾನವೀಯ ಸಂಬಂಧದ ಅನಾವರಣಕ್ಕೆ ಕಾರಣಭೂತವಾಗುವ ರಂಗಮಂಚ!

ನಮ್ಮ ಕುಲಗಳ ಸಂಪತ್ತನ್ನು ನಾವು ನಾಗನನ್ನು ನಂಬಿ ಬಿಡುತ್ತೇವೆ ಎಂದ ಮೇಲೆ, ಎಷ್ಟೋ ಕೊಪ್ಪರಿಗೆಗೆ ಅವನೇ ಕಾಯುತ್ತಾನೆ ಎಂದ ಮೇಲೆ ಅವನ ಮೇಲೆ ನಮ್ಮ ನಂಬಿಕೆ ಎಷ್ಟಿರಬೇಕು? ಎಷ್ಟರ ಮಟ್ಟಿಗಿನ ನಿಯತ್ತಿನ ಜೀವ ಅದು ಎಂಬುದು ಸ್ಪಷ್ಟವಾಗ್ತದೆ.

ಎಲ್ಲಕ್ಕಿಂತ ಮಿಗಿಲಾಗಿ ಯಾವ ರೀತಿ ಬ್ರಹ್ಮಾಂಡದ ಅಣು-ಅಣುವಿನ ನಡುವಿನ ಆಕರ್ಷಣೆಯಾಗಿ(ಸಂಕರ್ಷಣ/ಶಂಕರಾಭರಣ)ಅವನು ನಿಂತಿದ್ದಾನೋ, ಪಾತಾಳದ ಸಮಸ್ತ ಆಡಳಿತವನ್ನೂ, ಭೂಮಿಯ ಭಾರವನ್ನು ಹೊತ್ತು ನಿಂತಿದ್ದಾನೋ ಆ ನಿಲುವಿಗೆ ನಾವು ಕೊಡುವ ಹಾಲು-ಹೂವು-ಎಳನೀರುಗಳು ಏನೇನೂ ಅಲ್ಲ! ಆ ಕೃತಜ್ಞತೆ ಇನ್ನೂ ಹಿರಿದಾಗಬೇಕು, ನಾಗಬನಗಳು ಸಿಮೆಂಟಿನಿಂದ ಹೊರಬಂದು ಸ್ವಚ್ಛಂದವಾಗಿ ಪಂಚಭೂತಗಳೊಡನೆ ನಲಿಯಬೇಕು.

ಇಷ್ಟೆಲ್ಲ ಗಮನಿಸಿದ ಮೇಲೂ ಈ ಅನೂಚಾನವಾದ ಸಂಸ್ಕೃತಿಯ ಮೇಲೆ ಹಿರಿಯಿರದೇ ಕೊಂಕು ನುಡಿಯುತ್ತೀರಿ ಎಂದ ಮೇಲೆ ಇನ್ನೊಮ್ಮೆ ನೀವು ಹಿಂದೂಗಳಾಗಿ ಹುಟ್ಟದಿರಿ.🙏 ಸಮಸ್ತ "ಆಸ್ತೀಕ"ರಿಗೆ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು ನಾಗರಾಜನೆಂಬ ಹಿರಿಯಣ್ಣ ನಿಮ್ಮ ತಲೆ ಕಾಯಲಿ.❤️

ಅಂಕಣ - ನಿಖಿಲ್ ಎ ಬಿ 
ಮುಂಡಗೋಡ.