Ticker

6/recent/ticker-posts

ಮಥುರೆಯ ಬೃಹತ್ ಅರಮನೆಗೆ ಅಣ್ಣನ ಮಾತು ಕೇಳಿ ವಿಷವೂಣಿಸಲು ಬಂದ ತಂಗಿ

 ದಿಗ್ದಿಗಂತಗಳನ್ನು ಸ್ಪರ್ಷಿಸುವ ಗೋಪುರಗಳು,ಭೂಮಿಯನ್ನೇ ಸುತ್ತಿ ಅಳೆಯುವಷ್ಟು ವಿಸ್ತಾರ ಗೋಡೆ,ಶತಗಜಗಳೆತ್ತರ ಮೀರಿ ನಿಂತ ದ್ವಾರಬಾಗಿಲು,ಸುತ್ತೆಲ್ಲಾ ರಣಗುಡುವ ರಣಹದ್ದುಗಳಂತಹ ಬಲಾಢ್ಯರ ಸೈನ್ಯ,ಮುಂದೆ ದ್ವಾರದಲ್ಲಿ ಮಹಿಷನ ಸೋದರರೋ ಎಂಬಂತೆ ಕಾಣುವ ದೈತ್ಯರಿಬ್ಬರು.ಇವರನ್ನೆಲ್ಲಾ ದಾಟಿಕೊಂಡು ಸದಾ ರೌದ್ರಭಾವವನ್ನು ತುಂಬಿಕೊಡುವ ನಿಶ್ಶಬ್ಧ ಕೋಟೆ ಬಾಗಿಲುಗಳನ್ನು ಭೇದಿಸಿಕೊಂಡು ಸುಂದರಿಯೊಬ್ಬಳು ಪ್ರಾಂಗಣಕ್ಕೆ ಕಾಲಿಡುತ್ತಿದ್ದಾಳೆ.ಅವಳ ಕಣ್ಣುಗಳೆರೆಡು ಅರ್ಧ ರೇಷ್ಮೆಯ ರೆಪ್ಪೆಯಿಂದ ಮುಚ್ಚಿವೆ,ಸೆರಗು ಪೂರ್ಣಚಂದ್ರನಿಗೆ ಬಡಿದ ಕೇತುವಿನಂತೆ ಅವಳ ಕಾಂತಿಯನ್ನು ಅದರ ಪ್ರಾಜ್ವಲ್ಯವನ್ನು ತಡೆಹಿಡಿದಿದೆ.ಬಂಗಾರದ ಆಭರಣಗಳು ಇವಳನ್ನು ಬಿಟ್ಟಿರಲಾರೆವೆಂಬಂತೆ ಅಂಟಿಕೊಂಡಿವೆ,ಅಡಿಯಿಂದ ಮುಡಿವರೆಗೆ ಹರಡಿರಿಯುವ ನೀಳಕೇಶದ ಚಂದ ಜಡೆಯು ಸುತ್ತ ಜಗದ ಮೈಮರೆಸುತ್ತದೆ,ತುಟಿಗಳೆರೆಡು ಕಂಪಿಸುತ ಇನ್ನೇನೂ ಗಾಳಿ ಸೋಕಿದರೆ ನೋವಾದೀತು ಎಂಬ ಭಾವವನ್ನು ನೋಡುಗರಿಗೆ ತಂದುಕೊಡುತ್ತದೆ‌.ಅವಳು ಜೀವಂತ ಶೃಂಗಾರ ಕಾವ್ಯ,ಅವಳಾಂತರ್ಯ ಮಾತ್ರ ಶೋಕಗೀತೆಗಳ ಗಣಿ.,ಎಲ್ಲವನು ಕಳೆದು ಇಲ್ಲದನು ಹುಡುಕುವಾಕೆ,ಇರುವ ಭಾಗ್ಯವನು ನೆನೆದು ಕೊರಗುವಾಕೆ.



ಸುಮ್ಮನೆ ಪ್ರಾಂಗಣದಲಿ ಭಾರವಾದ ಹೆಜ್ಜೆ ಇಡುತ್ತಿರುವ ಅವಳಿಗೆ ಮೇಘಸದೃಶ ಧ್ವನಿಯೊಂದು ಅಂತರಾಳದ ಚಿಂತೆಯಿಂದಲೇ ಎಚ್ಚರಿಸುತ್ತಿದೆ."ಪೂತನಿ"ವಿಶಾಲವಾದ ಅರಮನೆ ಸಿಡಿಲ ಬಡಿತವ ಪ್ರತಿ ಧ್ವನಿಸುವಂತೆ ಆ ಶಬ್ದದ ಅನುಕರಣೆ ಮಾಡಿತು.


ಶಬ್ದ ಹಿನ್ನಲೆಯಿಂದಲೇ ಭೂಮಿಯನ್ನು ಮೆಟ್ಟುತ್ತಾ ಮೃತ್ಯುರಾಯನ ಸದೃಶ ಶರೀರವೊಂದು ಅಟ್ಟಲಿಂದ ಇಳಿಯುತ್ತಾ ಬಂದಿತು.ಸ್ವಾಗತ,ಸುಸ್ವಾಗತ ಈ ಕಂಸನ ಆಸ್ಥಾನಕ್ಕೆ.ಎಂದು ಕಂಸನು ತನ್ನ ಸೂರ್ಯತೇಜ ಸಮಾನ ಸಿಂಹಾಸದಲಿ ಆಸೀನನಾದ.

ಪೂತನಿ ಸಣ್ಣಗೆ ಮುಗುಳ್ನಕ್ಕಳು,

ಕಂಸ ತನ್ನ ಬಲಗೈಯನ್ನು ತಿರುವುತ್ತಾ ಬಂದ ಕಾರಣವೇನು ತಿಳಿಯಿತೇ?ಎಂದ.ಆಗ ಪೂತನಿ ಇಲ್ಲವೆಂಬಂತೆ ತಲೆಯಾಡಿಸಿದಳು,ಅವಳಿಗೆ ಗೊತ್ತಿಲ್ಲವೆಂಬುದೇನಲ್ಲ ಈ ಸಲವೂ ಯಾವುದೋ ಹತ್ಯೆ ತಾನೇ ಮಾತೂ ಆಡದ ಯಾವುದೋ ಮುಗ್ಧ ಕಂದನದು ಅಷ್ಟೇ ಅಲ್ಲವೇ ನನ್ನ ಕೆಲಸ.ಎಂದು ಸ್ವಗತದಲ್ಲಿ ಮರುಗಿದಳು‌.

ಕಂಸ ಮುಂದುವರೆಯುತ್ತಾ

"ಏನಿಲ್ಲಮ್ಮ ತಂಗಿ ಇತ್ತೀಚಿಗೆ ನನಗೆ ನಿದ್ದೇನೆ ಬರ್ತಿಲ್ಲ ತಂಗಿ ಬರೀ ಯಾವುದೋ ಪುಟ್ಟ ಪಿಶಾಚಿ ಬಂದು ಕತ್ತು ಹಿಸುಕಿ ಕೊಲ್ಲೋ ರೀತಿ ಕನಸು ಬೀಳುತ್ತೆ ಯಾರೋ ಮೈಯೆಲ್ಲಾ ನೀಲಿಬಣ್ಣ ಬಡೆದುಕೊಂಡವನು ಅಂಬೆಗಾಲಿಡುತ್ತಾ ಬಂದು ಎದೆ ಮೇಲೆ ಕೂತು ಗುದ್ದಿ ರಕ್ತವನ್ನು ಚಿಮ್ಮಿಸುತ್ತಾನೆ‌‌.ಹೆದರಿ ಎದ್ದು ಕುಂತು ಬಿಡುತ್ತೇನೆ,ನಾಲ್ಕು ದಿನ ಆಯ್ತಮ್ಮ ನಿದ್ದೆ ಮಾಡಿ.ಅದೇ ನಿನಗೂ ಗೊತ್ತಲ್ಲ ಆ ವಸುದೇವ-ದೇವಕಿಯರ ಅಷ್ಟಮಪುತ್ರ ನನ್ನ ಕೊಲ್ಲುತ್ತಾನೆಂದು ಆಕಾಶವಾಣಿ ಆಯ್ತಲ್ಲ ಆಗ್ಲಿಂದ ಕುಂತರೂ ನಿಂತರೂ ಅವನದೇ ಚಿಂತೆ ನಂಗೆ ಮದುವೆ ಆಗೋ ಹುಡುಗಿಯ ಬಗ್ಗೆನೂ ಇಷ್ಟು ನಾನು ಯೋಚನೆ ಮಾಡಿಲ್ವೇನೋ ಅನ್ಸುತ್ತೆ.ಅದಕ್ಕೆ ಅವತ್ತು ಎಂಟನೇ ಮಗು ಹುಡುಗಿ ಆಗಿದ್ಕೆ ಅವಳನ್ನ ಕೊಲ್ಲೋಕೆ ಹೋಗಿದ್ದೆ,ಅವಳು ಅದೆಲ್ಲೋ ಗೋಕುಲದಲ್ಲಿ ಅವನಿದ್ದಾನೆ ಎಂದಳು. ಅವತ್ತು ಹುಟ್ಟಿದ ಎಲ್ಲರನ್ನು ಕೊಂದರೂ ಅವನೊಬ್ಬನನ್ನು ಕೊಲ್ಲೋದಕ್ಕೆ ಆಗ್ಲಿಲ್ಲ ಕಣಮ್ಮ ಆ ಹುಡುಗ ಅವನ ಹೆಸರು ಏನೋ ಹೇಳಿದ್ರು ಹಾ "ಕೃಷ್ಣ" ಬಹಳ ಚುರುಕಂತೆ ನನಗಂತೂ ಗೊತ್ತಿಲ್ಲ ನೋಡಿದವರು ಹೇಳ್ತಾರೆ.ನಿನಗೆ ವರಸೆಯಲ್ಲಿ ಸೋದರಳಿಯ ಆಗ್ಬೇಕಂತೆ.ಅದೇ ಈಗ ನೀನೇನ್ಮಾಡ್ಬೇಕಂದ್ರೆ".... ಅಂತ ರಾಗ ಎಳೆದ

ಆಗ ಪೂತನಿ "ಹೇಳಣ್ಣ ಏನ್ ಮಾಡ್ಬೇಕು"?

ಎಂದಳು."ಏನಿಲ್ಲಮ್ಮ ನೀನು ಅವನಿಗೆ ವಿಷಪೂರಿತ ಎದೆಹಾಲುಣಿಸಿ ಅವನನ್ನು ಕೊಲ್ಲಬೇಕು ನೀನ್ ನನ್ ತಂಗಿ ಒಂದು ಹೆಣ್ಣು ಎಂದು ನಿನಗೆ ಹೇಳ್ದೆ ನನ್ನ ಸಂಕಟ ನಿನ್ನ ಬಿಟ್ಟರೆ ಯಾರೂ ಅರ್ಥ ಮಾಡ್ಕೋತಾರಮ್ಮ"ಅನ್ನೋ ಕಂಸನ ಉತ್ತರ ಪೂತನಿಯ ಕರ್ಣವನ್ನು ಭೇದಿಸಿ ಹೃದ್ಯಾಂತರಾಳದಿಂದ ಅಶ್ರುಗಳ ಪ್ರಪಾತವನ್ನೇ ಸೃಷ್ಟಿಸಿತು.ಛೇ!!ನನ್ನ ಮೊಲೆಹಾಲನ್ನು ಉಣಿಸಿ ಶಿಶುವೊಂದನ್ನು ಪೊರೆಯುವ ಅವಕಾಶವನ್ನಂತೂ ನನಗೆ ನೀಡಲಿಲ್ಲ,ಈಗ ತಾನೇ ಹುಟ್ಟಿ ತಂದೆ-ತಾಯಿಯರ ಮುಖವನ್ನೇ ನೋಡದ ಮಗುವೊಂದರ ಪ್ರಾಣ ತೆಗೆಯುವ ಪ್ರಾರಾಬ್ಧವೇ ಏಕೆ ದೇವರೆ? ನನ್ನಿಂದೇನೂ ತಪ್ಪಾಯ್ತು? ಜನ್ಮಜನ್ಮಗಳಲ್ಲಿ ಯಾವ ತಾಯಿಯೂ ನೋಡಬಾರದ ದೃಶ್ಯಗಳ ನೋಡಿರುವೆ‌.

ಎಂಟ್ಹತ್ತು ಉಸಿರು ಎಳೆದು ಜಗವನ್ನು ಕಣ್ತುಂಬಿಕೊಂಡು ಜಿಂಕೆಯಂತೆ ಜಿಗಿದು ಕುಣಿದಾಡುಬೇಕಿದ್ದ  ಕೂಸುಗಳಲ್ಲಿ ಅರ್ಧ ಗರ್ಭದಲ್ಲೇ ಸತ್ತವು,ಇನ್ನರ್ಧ ನನ್ನ ಉಡಿಯಲ್ಲೇ ಏಕೆ ಪ್ರಭುವೇ ಈ ಶಿಕ್ಷೆ?ನಾನೇನೂ ತಪ್ಪು ಮಾಡಿರುವೆ?ಕ್ಷಣಕ್ಷಣವೂ ಅತ್ತೆಯ "ನೀನು ದರಿದ್ರ ಮಗು ಹೆತ್ತು ಬದುಕಿಸಿಕೊಳ್ಳುವ ಗಟ್ಟಿಗಿತ್ತಿಯಲ್ಲ ನನ್ನ ಕುಟುಂಬಕ್ಕೆ ಅಂಟಿದ ಪೀಡೆ"ಎಂಬ ಮಾತುಗಳು ಎದೆಯನ್ನು ಇರಿಯುತ್ತವೆ,ಬಹುಷಃ ಗಂಡ ಹೇಳುವ ಸಾಂತ್ವಾನವೇ ನನ್ನ ಜೀವಂತವಾಗಿಟ್ಟಿದೆ,ಇಲ್ಲದಿದ್ದಲ್ಲಿ ಯಾವಾಗಲೋ ನಾನು ಗತಿಸುತ್ತಿದೆ,ಆದರೇನು?ಅವರಿಗೆ ಬಯಕೆಯಿಲ್ಲವೇ?ಮಗು ಬೇಕೆಂಬ ಆಸೆ ಇಲ್ಲವೇ ಪತಿ ಪ್ರತ್ಯಕ್ಷ ದೇವತಾ ಎನ್ನುತ್ತಾರೆ.ಅವನ ಬಯಕೆ ಪೂರೈಸದ ನಾನೊಂದು ಹೆಣ್ಣೇ ಛೇ ಈ ಮಹಾಷಯ ಕಂಸ ಅಣ್ಣನೆನಿಸಿಕೊಂಡವನು ಇಂತಹ ಕೆಲಸಗಳಿಗೆ ಕರೆಸಿಕೊಂಡು "ನೀನು ಹೆಣ್ಣೆಂದು ನಿನ್ನ ಬಳಿ ಹೇಳುತ್ತೇನೆ" ಅನ್ನುತ್ತಾನಲ್ಲ ಇವನಿಗೆ ಒಂದು ಮಗುವನ್ನು ಕೊಲ್ಲುವಾಗ ಕೊಲ್ಲಲು ಹೇಳುವಾಗ ನಾನು ಹೆಣ್ಣೆಂಬುದು ತಿಳಿಯನೇ?ಅಷ್ಟೊಂದು ಸ್ವಾರ್ಥಿಯಾಗಿಬಿಟ್ಟನೇ? ಎಂದು ಮನಸಲ್ಲೇ ಅಳುತ್ತಾಳೆ.ಹೊರಗೆ ಉಮ್ಮಳಿಸಿ ಬರುತ್ತಿದ್ದ ಭಾವೋದ್ವೇಗದ ಆಣೆಕಟ್ಟೆಯ ಗೋಡೆಗಳು ಸೀಳಿ ಕಣ್ಣೀರು ಹರಿಯುತ್ತದೆ.ಕಂಸನು"ಏನಾಯ್ತಮ್ಮ ನಿನಗಾಗದಿದ್ದರೆ ಹೇಳು ನಿನ್ನ ಗಂಡನಿಗೆ ಒಂದಾ ಎರಡಾ ಸಹಾಯ ಮಾಡಿದ್ದು ಆ ಋಣ ತೀರಿಸುತ್ತೀಯ ಎಂಬ ಭರವಸೆ ಇದೆ ನಿನ್ನ ಮೇಲೆ"ಎಂದು ಹೇಳುತ್ತಾನೆ.

ಕಂಸ ನೀನು ಇಷ್ಟು ನೀಚನೆಂದು ತಿಳಿದಿರಿಲಿಲ್ಲ ಎಂದು ಮನದಲ್ಲಿ ಎಣಿಸಿ ಋಣ ಸಂದಾಯಕ್ಕಾಗಿ ಹೂಂಗುಟ್ಟುತ್ತಾಳೆ.ಪೂತನಿಯ ಗೋಕುಲ ಪಯಣ ಆರಂಭವಾಗಿದೆ.

ಸುತ್ತ ನೂರೆಂಟು ಹಳ್ಳಿಗಳ ಮಂಡಲಕೆ ಈಶನಾದ ನಂದ ಮಹಾರಾಜನ ಪಾರುಪತ್ಯದಲ್ಲಿ ಗೋಕುಲ ಸ್ವಚ್ಛಂದವಾಗಿದೆ.ಗುಡ್ಡಗಾಡುಗಳು ಕೈಜೋಡಿಸಿ ಊರಿಗೆ ತೋರಣ ಕಟ್ಟಿದರೆ,ನದಿ,ಝರಿ,ತೊರೆಗಳು ಮೈಛಳಿ ಬಿಟ್ಟು ಹರಿಯುತಿವೆ,ಇನ್ನು ಸೂರ್ಯನಂತೂ ಊರಿನ ಚೆಲುವನ್ನು ಆಸ್ವಾದಿಸುತ್ತಾ ಸಾಯಂಕಾಲವಾದರೂ ಸರಿಯುವ ಲಕ್ಷಣ ತೋರಿಸಲಾರ,ಊರಿನ ಗೋಪಿಕೆಯರ ಕಾಲ್ಗೆಜ್ಜೆ ಸಂದಿನ ಇಂಪಿಗೆ ಚಂದ್ರ ಮತ್ತಷ್ಟು ತಂಪಾಗುವ,ಕೆಂಪಾಗುವ.

ಊರನ್ನು ದಾಟಿ ಹೊರವಲಯದಲ್ಲಿದ್ದ ಗೋಕುಲದ ನಂದನ ಅರಮನೆಗೆ ಬಂದು ಬಿಡುತ್ತದೆ ಪೂತನಿಯ ಸವಾರಿ ತಳಿರುತೋರಣದಿಂದ ಸಾಲಕೃಂತಗೊಂಡ,ಜಗದ ದಿಗ್ಗಜರೆಲ್ಲಾ ಮೇಳೈಸಿ ಆನಂದದಿ ತೂಗೂತಿಹ ಅರಮನೆಯ ದಿಕ್ಕು ದಿಕ್ಕಿಂದ ಹಾಡುಗಳು ಕೇಳುತ್ತಿವೆ.ಅದರಲ್ಲಿ ಮೊದಲನೆಯದಾಗಿ ತಾರಮ್ಮಯ್ಯ ಅದುಕುಲವಾರಿಧಿ ಚಂದ್ರಮನ ಎಂದು ಹಾರೈಸುವ ಗೋಪಿಕೆಯರು ಒಂದೆಡೆಯಾದರೆ,ತೂಗಿರೆ ರಂಗನ್ನ ಎಂಬ ಮೇಳದ ಸುಶ್ರಾವ್ಯಸ್ವರಗಳು ಮತ್ತೊಂದೆಡೆ ಇಷ್ಟೆಲ್ಲಾ ಸಂಭ್ರಮದ ನಡುವೆ ಯಷೋಧೆಯು ಕೃಷ್ಣನನ್ನು ತೊಟ್ಟಿಲಲ್ಲೇ ಬಿಟ್ಟು ಹೋಗುತ್ತಾಳೆ,ಇದೇ ಸಮಯವೆಂದು ಒಳಗೆ ಗೋಪಿಕಾ ವೇಷದಿ ಧಾವಿಸಿದ ಪೂತನಿ ಕೃಷ್ಣನನ್ನು ನೋಡುತ್ತಾಳೆ.ತಕ್ಷಣ ಬಂದ ಯಷೋಧೆಯನ್ನು ನೋಡಿ ಮಗುವಿಗೆ ಹಾಲುಣಿಸುವೆ ಎಂದು ಹೇಳಿ ಮಗುವನ್ನು ಎತ್ತಿಕೊಳ್ಳುತ್ತಾಳೆ.

ಆಹಾ!!ಎಂಥಾ ಸೊಬಗು ದಿವ್ಯಮಾಲೆಯನ್ನು,ದಿವ್ಯಗಂಧವನ್ನು ಧರಿಸಿದ ಅವನು ಸರ್ವರಿಗೂ ಆಶ್ಚರ್ಯವನ್ನುಂಟುಮಾಡುತ್ತಿದ್ದಾನೆ,ವಿಶ್ವವೇ ಅವನ ಮುಖದಲ್ಲಿ ಕಾಣುತ್ತಿದೆ,ಸಹಸ್ರಸೂರ್ಯರು ಒಮ್ಮೆಲೇ ಉದಿಯಿಸದರೆ ಉಂಟಾಗುವ ಪ್ರಭೆಯುಳ್ಳ ಮಹಾತ್ಮನಾಗಿರುವವನಾಗಿದ್ದಾನವನು ಬರೀ ಮಹಾತ್ಮನಲ್ಲ,ಪರಮಾತ್ಮ!!ಎನ್ನುತ್ತಾ ಕೈಮುಗಿಯುತ್ತಾಳೆ,ಅಲ್ಲಿಗೆ ಒಂದಂತೂ ಖಚಿತವಾಗುತ್ತೆ."ಇಂದೆನಗೆ ಮುಕ್ತಿ" "ಇಂದೆನಗೆ ಮುಕ್ತಿ" ಎಂದು ನಭೋಮಂಡಲ ಕುಣಿಸುವಂತೆ ಕುಣಿಯುತ್ತಾಳೆ.ಶೃದ್ಧೆಯಿಂದ ಅವನಿಗೆ ಹಾಲುಣಿಸುತ್ತಾ ಇರುವಾಗ ಅವಳ ಬದುಕೊಮ್ಮೆ ಕಣ್ಣ.ಮುಂದೆ ಹಾಯುತ್ತದೆ,ಗಂಡನಿಗೆ ಕ್ಷಮಿಸಿ ಎನ್ನುತ್ತಾ,ಅತ್ತೆಯ ಕ್ಷಮೆ ಕೇಳುತ್ತಾ ಕಂಸನಿಗೆ ಮರುಗುತ್ತಾ ಇಹಲೋಕವ ತೊರೆಯುವ ಸಂತಸದಲ್ಲಿ ಕಣ್ಮುಚ್ಚುತ್ತಾಳೆ.

ಅಷ್ಟರಲ್ಲಿ ಏನಾ ಶಬ್ದ "ಅಮ್ಮಾ" ಯಾರು ಹೇಳಿದ್ದು ಕೃಷ್ಣ ನನ್ನ ಕೃಷ್ಣ

ಪರಮಾತ್ಮ  ನುಡಿದನೇ ಧನ್ಯನಾದೆ ತಂದೆ ಎಂದು.ಕೃಷ್ಣನ ತಲೆ ಸವರುತ್ತಾಳೆ.ಪರಮಾತ್ಮನಾದ ಶ್ರೀಹರಿಯು ಹೇಳುತ್ತಾ "ತಾಯೆ ಮಗು ಹೆತ್ತವರು,ಮಗು ಇದ್ದವರಷ್ಟೇ ತಾಯಿ ಅಲ್ಲಮ್ಮ,ಮಹಾಮಾತೃವಾದ ನೀನು ಕಣಮ್ಮ ತಾಯಿ ನನಗೆ ತಾಯಿಯಾದ ನೀನು ಜಗದ ತಾಯಿ ಲೋಕಮಾತೆ ಪೂತನಿ ಕೃಷ್ಣಮಾತೆ ಪೂತನಿ"ಎಂದು ಹರಿಸುತ್ತಾನೆ ಧನ್ಯಳಾದ ಪೂತನಿ ಪರಂಧಾಮಕ್ಕೆ ತೆರಳುತ್ತಾಳೆ ಜಗತ್ತಿಗೆ ಹೆರಲಾದವರು ಬಂಜೆಯಲ್ಲ,ಹೆತ್ತು ಸಲಹರಾದವರು ಬಂಜೆ.ಎಂದು ಸಾರಿ ಸಾರಿ ಹೇಳುತ್ತಾಳೆ.

ನಿಖಿಲ್ ಎ ಬಿ - ಮುಂಡಗೋಡ