ಮುಂಡಗೋಡ:ಸಾಮಾನ್ಯ ಸಭೆಗೆ ಸತತವಾಗಿ ಗೈರು ಆಗಿದ್ದ ಹಾಗೂ ಗ್ರಾಮ ಪಂಚಾಯತ ಅಭಿವೃದ್ಧಿಯಲ್ಲಿ ಸಹಕಾರ ನೀಡುತ್ತಿಲ್ಲ ಎಂಬ ಆರೋಪದ ಮೇಲೆ, ತಾಲೂಕಿನ ಬಾಚಣಕಿ ಗ್ರಾಮ ಪಂಚಾಯತ ಪಿಡಿಓ ತಾರಾಮಣಿ ಗಂಗಪ್ಪ ಅವರನ್ನು ಜಿಲ್ಲಾ ಪಂಚಾಯತ ಸಿಇಓ ಎಂ.ಪ್ರಿಯಾಂಗಾ ಅವರು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದೇ ಗೈರು ಇರುವುದು, ನಾಲ್ಕು ಬಾರಿ ಸಾಮಾನ್ಯ ಸಭೆ ಕರೆದು ಗೈರಾಗಿರುವುದು ಅಮಾನತ್ತಿಗೆ ಪ್ರಮುಖ ಕಾರಣವಾಗಿದೆ. ಇದಲ್ಲದೇ ವಸತಿ ಯೋಜನೆಗಳ ಮನೆಗಳ ನಿರ್ಮಾಣದಲ್ಲಿ ಪ್ರಗತಿ ಕುಂಠಿತವಾಗಿರುವುದು ಹಾಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರಗತಿ ಸಾಧಿಸುವಲ್ಲಿ ವಿಫಲವಾಗಿರುವುದು ಅಮಾನತ್ತು ಮಾಡಲು ಇರುವ ಮತ್ತೆರೆಡು ಕಾರಣಗಳಾಗಿವೆ. ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷತನ ಹಾಗೂ ಬೇಜವಾಬ್ದಾರಿತನ ನಡವಳಿಕೆ ಹಾಗೂ ಮೇಲಾಧಿಕಾರಿಗಳ ನಿರ್ದೇಶನಗಳನ್ನು ಪಾಲಿಸುವಲ್ಲಿವಿಫಲರಾಗಿ ಕರ್ತವ್ಯಲೋಪ ಎಸಗಿರುವ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಪಿಡಿಓ ತಾರಾಮಣಿ ಗಂಗಪ್ಪ ಅವರನ್ನು ಅಮಾನತ್ತು ಮಾಡಲಾಗಿದೆ.
ಪಿಡಿಓ ವಿರುದ್ಧ ದೂರು ನೀಡಿದ್ದರು:ಬಾಚಣಕಿ ಗ್ರಾಮ ಪಂಚಾಯತಿ ಪಿಡಿಓ ತಾರಾಮಣಿ ಅವರು, ಚುನಾಯಿತ ಜನಪ್ರತಿನಿಧಿಗಳಿಗೆ ಗೌರವ ನೀಡುತ್ತಿಲ್ಲ. ಅಭಿವೃದ್ಧಿ ಕೆಲಸಗಳಿಗೂ ಸ್ಪಂದಿಸುತ್ತಿಲ್ಲ ಎಂದು ಕಳೆದ ತಿಂಗಳು ಬಾಚಣಕಿ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು, ತಾಲೂಕು ಪಂಚಾಯತ ಇಓ ಪ್ರವೀಣ ಕಟ್ಟಿ ಅವರಿಗೆ ದೂರು ನೀಡಿದ್ದರು. ಪಿಡಿಓ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರಲ್ಲದೇ, ಅಲ್ಲಿಂದ ಬೇರೆಡೆ ವರ್ಗಾವಣೆ ಮಾಡುವಂತೆ ಆಗ್ರಹಿಸಿದ್ದರು. ಇದಾದ ನಂತರ ಜಿಲ್ಲಾಧಿಕಾರಿ ಕಚೇರಿಗೂ ತೆರಳಿ, ಪಿಡಿಓ ಕಾರ್ಯವೈಖರಿ ಬಗ್ಗೆ ದೂರು ಸಲ್ಲಿಸಿದ್ದರು.


ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು