Ticker

6/recent/ticker-posts

ಮಂತ್ರಿ ಮಾಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ:ಹೆಬ್ಬಾರ್

ಮುಂಡಗೋಡ:'ಕಳೆದ ಒಂದು ವರ್ಷ ಐದು ತಿಂಗಳು ಸಚಿವನಾಗಿ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಬಿಜೆಪಿ ಪಕ್ಷಕ್ಕೆ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಧನ್ಯವಾದ ತಿಳಿಸುತ್ತೇನೆ. ವಿಶೇಷವಾಗಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಲು ಸಹಕಾರ ನೀಡಿದ ಜಿಲ್ಲೆಯ ಅಧಿಕಾರಿಗಳು, ಜನರು ಹಾಗೂ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಜಿಲ್ಲೆಯ ಅಭಿವೃಧ್ಧಿಗೆ ಅಧಿಕಾರಿಗಳ ತಂಡವು ಉತ್ತಮ ಸಹಕಾರ ನೀಡಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿವರಾಮ ಹೆಬ್ಬಾರ್‌ ಹೇಳಿದರು.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ದಿನವೇ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಸಚಿವ ಸಂಪುಟದ ಸದಸ್ಯರು ತಮ್ಮ ಅವಧಿಯಲ್ಲಿ ಸಹಕಾರ ನೀಡಿದ ಅಧಿಕಾರಿಗಳು, ಮತದಾರರು ಹಾಗೂ ಪಕ್ಷಕ್ಕೆ ಭಾರವಾದ ಹೃದಯದಿಂದ ಧನ್ಯವಾದ ಹೇಳುತ್ತಿದ್ದಾರೆ. ಅದರಂತೆ ಕಾರ್ಮಿಕ ಸಚಿವರಾಗಿದ್ದ ಶಿವರಾಮ ಹೆಬ್ಬಾರ್‌ ಇಲ್ಲಿನ ಪ್ರವಾಸಿಮಂದಿರದಲ್ಲಿ ಮಾಧ್ಯಮದವರೊಂದಿಗೆ ಸೋಮವಾರ ಮುಕ್ತವಾಗಿ ಮಾತನಾಡಿದರು. 

ಶೀಘ್ರದಲ್ಲಿಯೇ ನೂತನ ಮುಖ್ಯಮಂತ್ರಿ ಆಯ್ಕೆಯನ್ನು ಹೈಕಮಾಂಡ್‌ ಮಾಡಲಿದೆ. ಹೊಸ ಮಂತ್ರಿಮಂಡಲದಲ್ಲಿ ಯಾರು ಸಚಿವರಾಗಬೇಕು? ಯಾಕೆ ಆಗಬೇಕು? ಯಾರನ್ನು ಮಾಡಬೇಕು? ಎಂಬುದನ್ನು ನೂತನ ಮುಖ್ಯಮಂತ್ರಿ ಹಾಗೂ ಹೈಕಮಾಂಡ್‌ ನಿರ್ಧರಿಸಲಿದೆ ಎಂದ ಶಿವರಾಮ ಹೆಬ್ಬಾರ್‌ ಅವರು, ಸಚಿವನಾಗಿ ಮಾಡುವುದು ಬಿಡುವುದು ಹೈಕಮಾಂಡ್‌ ಗೆ ಬಿಟ್ಟ ವಿಷಯ. ಮಂತ್ರಿ ಮಾಡಿ ಎಂದು ಕೇಳುವುದಿಲ್ಲ. ಸಚಿವ ಸ್ಥಾನ ಕೊಟ್ಟರೆ ಕೆಲಸ ಮಾಡುತ್ತೇನೆ ಇಲ್ಲವಾದರೆ ಶಾಸಕನಾಗಿ ಕ್ಷೇತ್ರದ ಅಭಿವೃಧ್ದಿ ಮಾಡುವೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಬಿಜೆಪಿ ತಾಲೂಕಾಧ್ಯಕ್ಷ ನಾಗಭೂಷಣ ಹಾವಣಗಿ, ಮುಖಂಡರಾದ ಎಲ್.ಟಿ.ಪಾಟೀಲ, ಗುಡ್ಡಪ್ಪ ಕಾತೂರ, ಉಮೇಶ ಬಿಜಾಪುರ, ಜ್ಞಾನದೇವ ಗುಡಿಯಾಳ, ಬಸಯ್ಯ ನಡುವಿನಮನಿ, ಗಣೇಶ ಶಿರಾಲಿ, ಭರತರಾಜ ಹದಳಗಿ, ಬಸವರಾಜ ಸಂಗಮೇಶ್ವರ, ಮಹೇಶ ಹೊಸಕೊಪ್ಪ, ಮಂಜುನಾಥ ಪಾಟೀಲ, ಅಭಿಷೇಕ ರಾಯ್ಕರ, ಸಂಜೀವ ಪಿಸೆ, ಸಂತೋಷ ರಾಂಪುರೆ, ಸಂತೋಷ ತಳವಾರ, ನಾಗರಾಜ ಬೆಣ್ಣಿ, ದೇವು ಪಾಟೀಲ, ತುಕಾರಾಮ ಇಂಗಳೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.