Ticker

6/recent/ticker-posts

ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ ನೂತನ ಮುಖ್ಯಮಂತ್ರಿ..! ಅತಿವೃಷ್ಠಿ ಹಾನಿಯನ್ನು ಪರಿಶೀಲಿಸಿದ ಸಿ.ಎಂ. ಬೊಮ್ಮಾಯಿ..!!

ಯಲ್ಲಾಪುರ:ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡರು. ಇತ್ತೀಚಿನ ಮಳೆಯಿಂದ ಸೃಷ್ಟಿಯಾದ ಹಾನಿಯ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ, ಹಾನಿಯ ಅಂದಾಜು ಪರಿಶೀಲಿಸಿದರು.

ಜಿಟಿಜಿಟಿ ಮಳೆಯ ನಡುವೆಯೇ ಯಲ್ಲಾಪುರಕ್ಕೆ ಆಗಮಿಸಿದ ಅವರು, ಪೊಲೀಸ ಗೌರವ ವಂದನೆ ಸ್ವೀಕರಿಸಿದರು. ಯಲ್ಲಾಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಶಿವರಾಮ ಹೆಬ್ಬಾರ್‌ ಹೂಗುಚ್ಛ ನೀಡಿ, ಜಿಲ್ಲೆಗೆ ಬರಮಾಡಿಕೊಂಡರು. ಯಲ್ಲಾಪುರದ ತಾಲೂಕು ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಿರುವ ಡಯಾಲಿಸಿಸ್‌ ಕೇಂದ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

ನಂತರ ಪತ್ರಕರ್ತರ ಜೊತೆ ಮಾತನಾಡಿ, ಮಳೆಯಿಂದ ಬಹಳಷ್ಟು ಮನೆಗಳು ಹಾನಿಯಾಗಿವೆ. ರಸ್ತೆ ಹಾಗೂ ಸೇತುವೆ ಸಂಪರ್ಕ ಕಡಿತವಾಗಿದೆ. ನೆರೆಯಿಂದ ತೊಂದರೆಗೆ ಒಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸುತ್ತೇನೆ.  ಪ್ರಕೃತಿ ವಿಕೋಪದಡಿ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.  ನೆರೆ ಹಾವಳಿ ವೀಕ್ಷಣೆ ನಂತರ  ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ.  ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ಕಾರ ಬದ್ಧವಾಗಿದೆ ಎಂದರು


ಅತಿವೃಷ್ಟಿಯಿಂದ ಹಾನಿಗೊಳಗಾದ ಯಲ್ಲಾಪುರ ತಾಲೂಕಿನ ಕಳಚೆ  ಪ್ರದೇಶಗಳಿಗೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕ ಶಿವರಾಮ ಹೆಬ್ಬಾರ್ ಅವರು, ಮುಖ್ಯಮಂತ್ರಿಗಳಿಗೆ ಹಾನಿಗೊಳಗಾದ ಪ್ರದೇಶಗಳು ಹಾಗೂ ಸಂತ್ರಸ್ತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ತಿಳಿಸಿದರು. ಈ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಪುನರ್ ನಿರ್ಮಾಣಕ್ಕಾಗಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು. ಹಾನಿಗೊಳಗಾದ ಕುಟುಂಬಗಳಿಗೆ ಶೀಘ್ರದಲ್ಲೇ ಪರಿಹಾರವನ್ನು ಮಂಜೂರು ಮಾಡುವಂತೆ  ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದರು.


ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ, ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ಧಿ, ಭಟ್ಕಳ ಕ್ಷೇತ್ರದ ಶಾಸಕ ಸುನೀಲ ನಾಯ್ಕ, ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಧಿಕಾರಿಗಳು ಉಪಸ್ಥಿತರಿದ್ದರು.