ಮುಂಡಗೋಡ:ಕಾರ್ಮಿಕ ಸಚಿವರ ಭಾಷಣ ಎಂದಿಗಿಂತ ಇಂದು ತುಸು ಖಾರವಾಗಿತ್ತು. ಬಹಳ ದಿನಗಳಿಂದ ಹೇಳಲೇಬೇಕು ಎಂದುಕೊಂಡಂತಿದ್ದ ಮಾತುಗಳನ್ನು ಸಾರ್ವಜನಿಕರ ಮುಂದೆ ತೆರೆದಿಟ್ಟರು.
ಜಿಲ್ಲಾ ಉಸ್ತುವಾರಿ ಸಚಿವರ ಮಾತು, ಸಾರ್ವಜನಿಕ ಜೀವನದಲ್ಲಿರುವರಿಗೆ ಒಂತರಾ ಎಚ್ಚರಿಕೆಯ ಮಾತುಗಳಿಂತದ್ದವು.
ಅಷ್ಟಕ್ಕೂ ಸಚಿವ ಹೆಬ್ಬಾರ್ ಅವರು ಹೇಳಿದ್ದಾದರೂ ಏನು...?
'ಸಾರ್ವಜನಿಕ ಜೀವನದಲ್ಲಿರುವರು ಸಂಘರ್ಷದ ರಾಜಕಾರಣಕ್ಕೆ ಅಂತ್ಯ ಹಾಡಲೇಬೇಕು. ಇಲ್ಲವಾದರೆ ಜನರೇ, ನಮ್ಮನ್ನು ತಿರಸ್ಕರಿಸುವ ದಿನಗಳು ದೂರವಿಲ್ಲ' ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಆಕ್ರೋಶದಿಂದ ಹೇಳಿದ ಘಟನೆ ತಾಲೂಕಿನ ಚವಡಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
'ನಮ್ಮ ಇತಿಮಿತಿ, ಯೋಗ್ಯತೆ ಅರಿತುಕೊಳ್ಳಬೇಕು. ಕಿರಿತನ, ಹಿರಿತನದ ಅರ್ಥ ಗೊತ್ತಿರಬೇಕು' ಎಂದು ಆ ಮಾತಿಗೆ ಸೇರಿಸಿದರು.
ರಾಜಕಾರಣ ಬಿಡ್ರೀ...
ರಾಜಕಾರಣ ಇವತ್ತು ಇರುತ್ತೆ, ನಾಳೆ ಹೋಗುತ್ತೆ. ರಾಜಕಾರಣದಲ್ಲಿ ಯಾರೂ ಶಾಶ್ಚತರಲ್ಲ. ರಾಜಕಾರಣದಲ್ಲಿ ಸೋತೂ ನೋಡಿದ್ದೇನೆ, ಗೆದ್ದು ನೋಡಿದ್ದೇನೆ ಹಾಗೂ ಮಂತ್ರಿಯಾಗಿಯೂ ನೋಡಿದ್ದೇನೆ. ಆದರೆ ವ್ಯವಸ್ಥೆ ಶಾಶ್ವತವಾಗಿರುತ್ತದೆ. ನಮ್ಮ ನಡುವಳಿಕೆ ಮತ್ತೊಬ್ಬರಿಗೆ ಮಾದರಿಯಾಗಬೇಕು. ಇಲ್ಲವಾದರೆ, ಜೀವನದಲ್ಲಿ ಗಳಿಸಿದ ದುಡ್ಡು ಹೋದರೂ ಮತ್ತೆ ಗಳಿಸಬಹುದು. ಆದರೆ ದ್ವೇಷದ ರಾಜಕಾರಣ ಮಾಡುತ್ತ ಕುಳಿತರೆ, ಗೌರವ, ಹೆಸರು ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ದ್ವೇಷದ ರಾಜಕಾರಣಕ್ಕೆ ನಾನಂತೂ ಎಳ್ಳಷ್ಟು ಬೆಲೆ ಕೊಡುವುದಿಲ್ಲ ಎಂದು ಖಂಡತುಂಡವಾಗಿ ಹೇಳಿದರು.
ಪಿನ್ ಡ್ರಾಪ್ ಸೈಲೆನ್ಸ್....
ರಾಜಕಾರಣದಲ್ಲಿ ಹೇಗೆ ವರ್ತಿಸಬೇಕು. ವೈಯಕ್ತಿಕ ಜೀವನ ಹೇಗಿರಬೇಕು ಎಂಬುದರ ಬಗ್ಗೆ ತುಸು ಖಾರವಾಗಿಯೇ ಸಚಿವರು ಹೇಳಿದರು. ನೆರೆದಿದ್ದ ಜನರೂ, ಪಿನ್ ಡ್ರಾಪ್ ಸೈಲೆನ್ಸ್ ನಲ್ಲಿಯೇ ಕುಳಿತು, ಸಚಿವರ ಮಾತಿಗೆ ಕಿವಿಗೊಟ್ಟರು.
ರಾಜಕಾರಣ ಬೇರೆ, ವೈಯಕ್ತಿಕ ಜೀವನವೇ ಬೇರೆ....!
ರಾಜಕಾರಣಕ್ಕೆ ಒಂದು ಹಂತವಿರುತ್ತದೆ. ಎಲ್ಲದಕ್ಕೂ ರಾಜಕಾರಣ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಕಾಂಗ್ರೆಸ್ ಕಾರ್ಯಕರ್ತನ ಮಗಳ ಮದುವೆಗೆ ಹೋಗಬಾರದು ಎಂಬ ನಿಯಮವೇನೂ ಇಲ್ಲ. ರಾಜಕಾರಣದಲ್ಲಿ ಜಾತಿ, ಮತ, ಬೇಧ ಇರಬಾರದು. ಅದೂ ಒಳ್ಳೆಯ ಲಕ್ಷಣವೂ ಅಲ್ಲ ಎಂದ ಸಚಿವರು, ನನ್ನಿಂದಲೇ ಈ ಊರಿದೆ, ಆ ಊರಿದೆ ಎಂಬ ಅಹಂ ಇರಲೇಬಾರದು ಎಂದು ಕಡ್ಡಿಮುರಿದಂತೆ ಹೇಳಿದರು.
ಸಚಿವ ಹೆಬ್ಬಾರ್ ಅವರು ತಮ್ನ ಮಾತಿನದುದ್ದಕ್ಕೂ, ಆಕ್ರೋಶಭರಿತವಾಗಿಯೇ ಹೇಳಿರುವುದು ಕಾರ್ಯಕರ್ತರ ಅಚ್ಚರಿಗೆ ಕಾರಣವಾಯಿತು.
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು