ಮುಂಡಗೋಡ:ಖಾಸಗಿ ಆಸ್ಪತ್ರೆಯಿಂದ ಖರೀದಿಸಿ ಕೋವಿಡ್ ಲಸಿಕೆಯನ್ನು ಟಿಬೇಟಿಯನ್ನರು ಹಾಕಿಸಿಕೊಂಡರು.
18-44 ವರ್ಷ ಒಳಗಿನ ಲಾಮಾಗಳಿಗೆ, ಮುಂಡಗೋಡದ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಸಿಕ್ಕಿಲ್ಲ. ಅಲ್ಲದೇ ಟಿಬೇಟಿಯನ್ ಕ್ಯಾಂಪಿನಲ್ಲಿ ಕೋರೊನಾ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಲಾಮಾಗಳಲ್ಲಿಯೂ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಲಾಮಾಗಳು ಕ್ಯಾಂಪಿನ ಮುಖಂಡರಿಗೆ ನಮಗೂ ಲಸಿಕೆ ಕೊಡಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ.
ಕ್ಯಾಂಪಿನ ಚೇರಮನ್ ಲಾಖ್ಪಾ ಸಿರಿಂಗ್ ಹಾಗೂ ವಿವಿಧ ಬೌದ್ಧ ಮುಖಂಡರುಗಳು ಚರ್ಚೆ ನಡೆಸಿ, 18-44 ವರ್ಷ ಒಳಗಿನ ಲಾಮಾಗಳು ಹಾಗೂ ಮೊನ್ಯಾಸ್ಟ್ರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ, ಕೋವಿಡ್ ಲಸಿಕೆ ಹಾಕಿಸಲು ಮುಂದಾಗಿದ್ದಾರೆ.
ಅದರಂತೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯೊಂದಿಗೆ ಮಾತನಾಡಿ, ಒಂದು ಡೋಸ್‍ಗೆ 950 ರೂ. ನಿಗದಿಪಡಿಸಿಕೊಂಡಿದ್ದಾರೆ. ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯ ಸಿಬ್ಬಂದಿ, ಕೋವಿಶೀಲ್ಡ್ ಲಸಿಕೆಯನ್ನು, ತಾಲೂಕಿನ ಕ್ಯಾಂಪ ನಂ.3ರ ಲೋಸಲಿಂಗ್ ಮೊನ್ಯಾಸ್ಟ್ರಿಯಲ್ಲಿ ತಂದು, ಲಾಮಾಗಳಿಗೆ ಲಸಿಕೆ ಹಾಕಿದರು.
'ಲೋಸಲಿಂಗ್ ಮೊನ್ಯಾಸ್ಟ್ರಿಯ 700 ಲಾಮಾಗಳು ಹಾಗೂ ಗಜಾಂಗ್ ಮೊನ್ಯಾಸ್ಟ್ರಿಯ 400 ಲಾಮಾಗಳು ಸೋಮವಾರ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡರು. ಇನ್ನೂ ಹಲವು ಬೌದ್ದ ಮಂದಿರಗಳ ಲಾಮಾಗಳು ಲಸಿಕೆಗೆ ಬೇಡಿಕೆ ಇಟ್ಟಿದ್ದು, ಖಾಸಗಿ ಆಸ್ಪತ್ರೆ ಸಿಬ್ಬಂದಿ ಲಸಿಕೆಯ ಲಭ್ಯತೆ ಮೇಲೆ, ಮತ್ತೆ ಹಾಕುತ್ತೇವೆ ಎಂದು ಭರವಸೆ ನೀಡಿದ್ದಾರೆ' ಎಂದು ಟಿಬೇಟಿಯನ್ ಕ್ಯಾಂಪ ಚೇರಮನ್ ಲಾಖ್ಪಾ ಸಿರಿಂಗ್ ನ್ಯೂಸ್@ಮುಂಡಗೋಡಕ್ಕೆ ಪ್ರತಿಕ್ರಿಯಿಸಿದ್ದಾರೆ.
ಮುಂಡಗೋಡದ ತಾಲೂಕು ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಹಾಕಲು ಆರಂಭಿಸಿದಾಗ, ಟಿಭೆಟಿಯನ್ನರೇ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಲಸಿಕೆ ಹಾಕಿಸಿಕೊಂಡಿದ್ದರು. ಕೋವಿಡ್ ಎರಡನೇ ಅಲೆ ಜೋರಾಗುತ್ತಿದ್ದಂತೆ, ಲಸಿಕೆಗೆ ಬೇಡಿಕೆ ಹೆಚ್ಚಾದಂತೆ, ಸರ್ಕಾರ ಫ್ರಂಟಲೈನ್ ವಾರಿಯರ್ಸ್, ವೃದ್ಧರಿಗೆ ಲಸಿಕೆ ಹಾಕುವುದನ್ನು ಮುಂದುವರೆಸಿದೆ. ಇದರಿಂದ ಎಲ್ಲರಿಗೂ ಲಸಿಕೆ ಸದ್ಯಕ್ಕೆ ಸಿಗುತ್ತಿಲ್ಲವಾದ್ದರಿಂದ, ಟಿಬೇಟಿಯನ್ನರು ದುಡ್ಡು ಕೊಟ್ಟು ಖಾಸಗಿ ಆಸ್ಪತ್ರೆಗಳಿಂದ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.



ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು