Ticker

6/recent/ticker-posts

ಬಡಕುಟುಂಬಗಳ ಮನೆ ಬಾಗಿಲಿಗೆ 'ಹೆಬ್ಬಾರ್ ರೇಷನ್ ಕಿಟ್'..! ಯಲ್ಲಾಪುರದ ಕಿರವತ್ತಿಯಲ್ಲಿ ಸೋಮವಾರ ಚಾಲನೆ..!

ಮುಂಡಗೋಡ:ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು, ಯಲ್ಲಾಪುರ ಕ್ಷೇತ್ರದ ಬಡಕುಟುಂಬಗಳಿಗೆ, ವೈಯಕ್ತಿಕವಾಗಿ 'ಹೆಬ್ಬಾರ್ ರೇಷನ್ ಕಿಟ್' ನೀಡಲು ಮುಂದಾಗಿದ್ದಾರೆ. ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿಯೂ, ಕ್ಷೇತ್ರದ ಬಡಕುಟುಂಬಗಳಿಗೆ ಇದೇ ರೀತಿ ಆಹಾರ ಸಾಮಗ್ರಿಗಳ ರೇಷನ್ ಕಿಟ್ ಗಳನ್ನು ವ್ಯವಸ್ಥಿತವಾಗಿ ಹಂಚಿಕೆ ಮಾಡಿದ್ದರು. 

ಕಷ್ಟದಲ್ಲಿರುವ ಜನರ ಜೊತೆ ನಾನಿರುತ್ತೇನೆ...!

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು, ಕಿಟ್ ಹಂಚಿಕೆಯ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದು, 'ತಮ್ಮ ಸಾರ್ವಜನಿಕ ಜೀವನದ ಪ್ರತಿ ಹೆಜ್ಜೆಯಲ್ಲಿಯೂ ಜೊತೆಗಿದ್ದು, ಮೂರು ಬಾರಿ ಶಾಸಕರನ್ನಾಗಿ ಮಾಡಿರುವ ಕ್ಷೇತ್ರದ ಜನರಿಗೆ ಸಹಾಯ ಮಾಡುವುದು ತಮ್ಮ ಕರ್ತವ್ಯ ಎಂದು ತಿಳಿದು ವೈಯಕ್ತಿಕವಾಗಿ ಕಿಟ್ ನೀಡಲು ನಿರ್ಧರಿಸಿದ್ದೇನೆ' ಎಂದು ತಿಳಿಸಿದ್ದಾರೆ.

ಶಿಸ್ತುಬದ್ಧ ಹಂಚಿಕೆ..!

ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ವ್ಯಾಪ್ತಿಯಲ್ಲಿರುವ ಒಟ್ಟು 63ಸಾವಿರ ಬಿ.ಪಿ.ಎಲ್ ಹಾಗೂ ಅಂತ್ಯೋದಯ ಕುಟುಂಬಗಳಿಗೆ ಇದರ ಪ್ರಯೋಜನ ಸಿಗಲಿದೆ. ಇಷ್ಟು ದೊಡ್ಡ ಮಟ್ಟದ ವಿತರಣಾ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ, ಬೂತ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ, ಬಡಕುಟುಂಬಗಳಿಗೆ ಟೋಕನ್ ನೀಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಟೋಕನ್ ಪಡೆದಿರುವ ಕುಟುಂಬಗಳ ಮನೆ ಬಾಗಿಲಿಗೆ ಕಿಟ್ ತಲುಪಿಸುವ ಜವಾಬ್ದಾರಿಯನ್ನು ಕಾರ್ಯಕರ್ತರು ಹೊತ್ತಿದ್ದಾರೆ. 


ಉಸ್ತುವಾರಿ ಹೊತ್ತಿರುವ ವಿವೇಕ ಹೆಬ್ಬಾರ್..!

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರ ಪುತ್ರ ಹಾಗೂ ಬಿಜೆಪಿ ಯುವಮುಖಂಡ ವಿವೇಕ ಹೆಬ್ಬಾರ್, ಈಗಾಗಲೇ ಯಲ್ಲಾಪುರ ತಾಲೂಕಿನ 11 ಗ್ರಾಮ ಪಂಚಾಯತಗಳು ಸೇರಿದಂತೆ, ಮುಂಡಗೋಡ, ಬನವಾಸಿಯಲ್ಲಿ ರೇಷನ್ ಕಿಟ್ ವಿತರಣೆ ಪೂರ್ವಸಿದ್ಧತಾ ಸಭೆಗಳನ್ನು ನಡೆಸಿದ್ದಾರೆ. ಅರ್ಹರಿಗೆ ಹಾಗೂ ಬಡಕುಟುಂಬಗಳಿಗೆ ಕಿಟ್ ತಲುಪಿಸಲು, ಕಾರ್ಯಕರ್ತರ ಪಡೆಯನ್ನೇ ಸಜ್ಜುಗೊಳಿಸಿದ್ದಾರೆ. 

ಸೋಮವಾರ ಚಾಲನೆ..!ಹೆಬ್ಬಾರ್ ರೇಷನ್ ಕಿಟ್ ನೀಡುವ ಕಾರ್ಯಕ್ರಮಕ್ಕೆ ಜೂನ.28ರಂದು ಸೋಮವಾರ ಬೆಳಿಗ್ಗೆ 10ಗಂಟೆಗೆ ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಚಾಲನೆ ನೀಡಲಿದ್ದಾರೆ. ನಂತರ, ಹುಣಸೆಟ್ಟಿಕೊಪ್ಪ, ಚಿಕ್ಕಮಾವಳ್ಳಿ, ಹಿತ್ಲಳ್ಳಿ, ಮಾವಿನಕಟ್ಟಾ, ಉಮ್ಮಚಗಿ, ಕಂಪ್ಲಿ ಗ್ರಾಮಗಳಲ್ಲಿ ರೇಷನ್ ಕಿಟ್ ವಿತರಣೆ ನಡೆಯಲಿದೆ.