ಮುಂಡಗೋಡ:ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬದಲಾವಣೆ ಪ್ರಶ್ನೆಯೇ ಇಲ್ಲ. ಎರಡು ಕೋವಿಡ್ ಅಲೆ, ನೆರೆ ಬಂದಾಗಲೂ, ಸಾಕಷ್ಟು ಪರಿಶ್ರಮ ವಹಿಸಿ, ರಾಜ್ಯದಲ್ಲಿ ಸಮರ್ಥವಾಗಿ ಆಡಳಿತ ನಿಭಾಯಿಸಿದ್ದಾರೆ. ಯಡಿಯೂರಪ್ಪ ನಾಯಕತ್ವದಲ್ಲಿ ಎಲ್ಲ ಶಾಸಕರು ವಿಶ್ವಾಸ ಇಟ್ಟಿದ್ದೇವೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ವಯಸ್ಸನ್ನು ಲೆಕ್ಕಿಸದೇ ನಾಡಿನ ಅಭಿವೃದ್ಧಿಗೆ ಸಿ.ಎಂ. ಕೆಲಸ ಮಾಡುತ್ತಿದ್ದಾರೆ. ಮುಂದಿನ ಚುನಾವಣೆವರೆಗೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಸಹಿ ಸಂಗ್ರಹ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಿಂದೆಯೂ ಹೇಳಿದ್ದೆ, ನಾಳೆಯೂ ಹೇಳುವೆ. ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಇಲ್ಲ. ಸಚಿವ ಸಂಪುಟದ ಎಲ್ಲ ಸಹದ್ಯೋಗಿಗಳು ಮುಖ್ಯಮಂತ್ರಿ ಪರವಾಗಿದ್ದೇವೆ ಎಂದು ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಕೆಲಸ ಮಾಡುವನಿಗೆ ಚತುರತೆ, ಆಸಕ್ತಿ ಹಾಗೂ ಬದ್ಧತೆಯೇ ಮಾನದಂಡ ಆಗಬೇಕು. ಕೆಲಸ ಮಾಡುವ ವ್ಯಕ್ತಿಗೆ ವಯಸ್ಸು ಮಾನದಂಡ ಆಗಬಾರದು. ಮುಖ್ಯಮಂತ್ರಿಗಳು ಈ ವಯಸ್ಸಿನಲ್ಲಿಯೂ ರಾಜ್ಯದ ತುಂಬ ಓಡಾಡಿಕೊಂಡು, ಅಭಿವೃದ್ಧಿಪಥದತ್ತ ರಾಜ್ಯವನ್ನು ಒಯ್ಯುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಹತ್ತಾರು ಬಾರಿ ಸ್ಪಷ್ಟನೆ ನೀಡಿದ್ದಾರೆ. ಸಚಿವರಾದ ಆರ್.ಅಶೋಕ ಹಾಗೂ ಬಸವರಾಜ ಬೊಮ್ಮಾಯಿ ಅವರು ಹೇಳಿದಂತೆ, ಸಿ.ಎಂ.ಅವರಿಗೆ ಮನಸ್ಸಿಗೆ ನೋವಾಗಿರುವುದರಿಂದ, ಹೈಕಮಾಂಡ್ ಹೇಳಿದ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂಬ ಮಾತನ್ನು ಹೇಳಿರಬಹುದು. ಬಿಟ್ಟರೆ ಅವರ ಹೇಳಿಕೆಗೆ ಯಾವುದೇ ಅಪಾರ್ಥ ಕಲ್ಪಿಸುವುದು ಬೇಡ ಎಂದು ಸಚಿವ ಹೆಬ್ಬಾರ್ ಹೇಳಿದರು.


ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು