Ticker

6/recent/ticker-posts

ಏಸೊಂದು ಮುದವಿತ್ತು! ಚಿಟ್ಟೆ ಹಿಡಿಯುವ ಸಮಯ ಮತ್ತೆ ಮರಳಬಹುದೇ?

 

ನಿಖಿಲ್ .ಎ. ಬಿ  ಮುಂಡಗೋಡ

ಮೊನ್ನೆ, ಅಜ್ಜಿ ಮನೆಗೆ ಹೋಗುವ ದಾರಿಯಲ್ಲಿ, ಹಾರುವ ಚಿಟ್ಟೆಯನ್ನು ಕೈವಶ ಮಾಡಿಕೊಳ್ಳಲು, ಬರಿ ಚಡ್ಡಿಯ ಮೇಲೆ ತಡುಕುತ್ತಿದ್ದ ಬಾಲಕನನ್ನು ನೋಡಿ, ರಪ್ಪನೆ ಬಾಲ್ಯ ಕಣ್ಮುಂದೆ ಕುಣಿಯಿತು!

ಎಷ್ಟು ಚೆನ್ನಾಗಿತ್ತಲ್ಲವಾ? ದಾಟಿ ಬಂದ ದಾರಿಯನ್ನೊಮ್ಮೆ ಮೆಲಕು ಹಾಕಿದೆ. ಗೊತ್ತಿದ್ದವರು, ಗೊತ್ತಿಲ್ಲದವರು, ಎಲ್ಲರಿಂದಲೂ ಪ್ರೀತಿಸಲ್ಪಡುವ, ಎಲ್ಲರ ಬಗ್ಗೆ ಕುತೂಹಲ ಹೊಂದಿರುವ ಆ ಸುಮಧುರ ಬಾಲ್ಯವು..ಕಂಬಳಿ ಹುಳುವು ಬಲಿಯುತಿರುವ ರೆಕ್ಕೆಯೊಡನೆ, ಪುಟ್ಟ ಗುಬ್ಬಿಗೆ ಪುಕ್ಕದ ನವಿರು ಹೊದಿಕೆ ಬಂದಂತೆ... 

ನಮಗೂ ಅಂಬೆಗಾಲಿನ ಆ ಮಂಡಿನೋವು ತರುವ ಮಧುರ ಯಾತನೆ ಕೊನೆಗೊಂಡು, ಪಾದಗಳು ಭೂತಾಯಿಯನ್ನು ಮುಟ್ಟುವ ಭವ್ಯ ಕಾಲ ಬರುತ್ತದೆ! ಈಗಿನ ಹಾಗೆ "ಸಮುದ್ರವಸನೇ ದೇವಿ ಪರ್ವತ ಸ್ಥನ ಮಂಡಲೇ ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಷಂ ಕ್ಷಮಸ್ವಮೇ" ಎಂದು ಭಯ-ಭಕ್ತಿಯಿಂದ ಕಾಲಿಡಬೇಕಿಲ್ಲ, ಮುಗ್ಧವಾಗಿ ಮೈಮುರಿದುಕೊಂಡು, ಗರಿಗೆದರಿಕೊಂಡು ಪುಟಿಯಬಹುದು. ಕಾಲಿಟ್ಟಲ್ಲೆಲ್ಲ ನನ್ನದೇ ಸಾಮ್ರಾಜ್ಯ. 

ಹೊರಗೆ ಕಾಲಿಡುತ್ತಲೇ, ಅಲ್ಲಲ್ಲಿ ನನ್ನ ಹೊಗಳಿ ಸ್ವಾಗತಿಸೋ ವಂಧಿ ಮಾಗಧರಾದ, ಚಲಿಸದೇ ಚಂಚಲಗೊಳಿಸುವ ಹಸಿರು ಬನಸಿರಿ, ಸಣ್ಣ-ಪುಟ್ಟ ಪ್ರಾಣಿ ಸಂಕುಲ, ಆಕಾಶಕ್ಕೆ ತಲೆ ಎತ್ತಿ ನೋಡಿದರೆ ಅಲ್ಯಾವುದೋ ನೆತ್ತಿ ಸುಡುವ ಬಂಗಾರದ ಗೊಂಬೆಯ(ಸೂರ್ಯ) ನಡುವೆ, ದೊಡ್ಡ ದೊಡ್ಡ ಬಿಳಿ ಬಿಳಿಯ ಕಲ್ಲುಗಳು (ಮೋಡ) ತೇಲುತಿರುವ ವಿಸ್ಮಯ, ಕೆಳಗೆ ನೋಡಿದರೆ ಎಲ್ಲ ಕಲ್ಲುಗಳು ಕಪ್ಪಗಿವೆ,ಸುತ್ತಲೂ ನನ್ನ ಸುತ್ತ ಒಮ್ಮೆ ಸುತ್ತಿದರೆ ಜಗವೇ ತಿರುಗುವ ಹಾಗೆ ಅನುಭವ!

ಚಿಟ್ಟೆಗಳನು ಹಿಡಿಯುವ ತವಕ, ಕೈಗೆ ಸಿಕ್ಕಿದ್ದು ಬಾಯಿಗೂ ಬರಲಿ ಎಂಬ ಆಸೆ, ಅಷ್ಟೊತ್ತಿಗೆ ನನ್ನಂತದೇ ಒಂದು ಆಕೃತಿ ಎದುರುಗೊಂಡಾಗ ಆಗುವ ಪುಳಕ, ಖುಷಿ ಇಬ್ಬರೂ ಸೇರಿ ಆಡುವಾಗ ಹರಸುವ ಸುತ್ತ ಪ್ರಕೃತಿ. ಏನೆಲ್ಲವನ್ನೂ ದಾಟಿಕೊಂಡು ಬಂದುಬಿಟ್ಟೆವು! ಈಗ ಸ್ವಾಗತ ಕೋರಿದ ಮರ ವಯಸ್ಸಾಗಿಯೋ, ಸಿಡಿಲು ಬಡಿದೋ, ಕಾಂಕ್ರೀಟ್ ಮನೆ ವಿಸ್ತಾರಕ್ಕೆ ತೊಂದರೆ ಆಗುತ್ತದೆ ಎಂದೋ ಕೆಳಗುರುಳಿ ಬಿಡುತ್ತವೆ. ಚಿಟ್ಟೆಗಳು ಎದುರಿಗೆ ಬಂದರೂ, ಮುಖದ ಮುಂದೆ ನಿಂತರೂ ನಮ್ಮ ಚಿಂತೆಗಳು ಯಕಶ್ಚಿತ್ ಅದೊಂದು ಕೀಟ ಎಂದೇ ಭ್ರಮಿಸಿ, ನಮ್ಮ ಕೈಗಳು ಹೊಡೆದು ಕಳಿಸುತ್ತವೆ, ಚಿಕ್ಕ ಪುಟ್ಟ ಪ್ರಾಣಿಗಳಲ್ಲಿ ಕುತೂಹಲವಿಡುವ ಕಣ್ಣುಗಳೂ ಇಂಗಿ ಹೋಗುತ್ತಿವೆ.

ಗಡಿ,ಬೇಲಿಗಳಿಲ್ಲದೇ ಸುತ್ತಾಡುತ್ತಿದ್ದ ಕಾಲುಗಳಿಗೆ ಇದು ನನ್ನ ಮನೆ, ಅದು ಬೇರೆಯವರ ಮನೆ ಎಂಬ ಸಂಕುಚಿತ ಪ್ರಜ್ಞೆ ಮೂಡಿ ಬಹಳ ವರ್ಷಗಳಾಗಿವೆ. ಆಕಾಶಕ್ಕೆ ತಲೆ ಎತ್ತಿ ನೋಡುವ ಅವಕಾಶವನ್ನೂ ಮೊಬೈಲ್ ಕಸಿದುಕೊಂಡಿದೆ. ಸುತ್ತಲೂ ತಿರುಗೋಣವೆಂದರೆ 'ಇವನಿಗೆ ಹುಚ್ಚಾ?' ಎಂಬ ಪ್ರಶ್ನೆ  ಎದುರಾಗಬಹುದೆಂಬ ಭಯ ಕಟ್ಟಿ ಹಾಕಿದೆ.

ಜೊತೆಗಾರನೀಗ ಬೆಳೆದ ಮನುಷ್ಯ ನನ್ನಲ್ಲಿ ಅಸೂಯೆಯಿಲ್ಲ, ಆದರೆ ನನ್ನ ಗುಣದ ಮೇಲೆ ಅವನಿಗೇ ಅಸೂಯೆ, ನನ್ನ ಅವನಿಗೆ ಹಂಗಿಸುವಾಗ ನನಗಾಗುವ ಜಿಗುಪ್ಸೆ, ನಮ್ಮಿಬ್ಬರ ಮನದ ಮಾಲಿನ್ಯ,ಸುತ್ತಲೆಲ್ಲ ಜಗದ ಮಾಲಿನ್ಯ;ಉಸಿರು ಕಟ್ಟಿದ ವಾತಾವರಣ ಎಲ್ಲವೂ ಕೂಡ ದೇಹ ಬೆಳೆದಂತೆ ಜಗ ಕಿರಿದಾಗುವುದು ಎಂಬ ದುಃಖವನ್ನು ಎದುರುಗೊಳಿಸಿ ಎಲ್ಲವನೂ ಕಿರಿದಾಗಿಸುತ್ತದೆ, ದೊಡ್ಡ ತಲೆ,ದೊಡ್ಡ ಹುದ್ದೆ,ದೊಡ್ಡತನ ಇವೆಲ್ಲವೂ ನಾನಾಗ ಬರಿಮೈಯಲ್ಲಿ ಅಲೆದಾಡುತ್ತಿದ್ದಾಗ ಇದ್ದ ಸ್ವಾತಂತ್ರ್ಯದ ಮುಂದೆ ತೃಣಕ್ಕೆ ಸಮಾನ! 

ಜಗದ ಎಲ್ಲ ಶ್ರೀಮಂತಿಕೆ ದೊರಕಿದರೂ, ಬಾಲ್ಯ ಸಿಗಲಾರದು ಎಂಬುದು ಕಟುಸತ್ಯ. ಅದು ಎಲ್ಲರೊಳಗಿನ ಅಳಕು ಕೂಡ. ಮತ್ತೊಮ್ಮೆ ಎಲ್ಲ ಸಣ್ಣದಾಗಬಾರದೇಕೆ? ಬಾಲ್ಯವೇ ದಯಮಾಡಿ ಮತ್ತೊಮ್ಮೆ ಬರುವೆಯಾ? ನಿನ್ನ ನಿರೀಕ್ಷೆಯಲ್ಲಿ....