Ticker

6/recent/ticker-posts

ಗ್ರಾಮಾಯಣ

 

ಮಲವಳ್ಳಿಯ ಕೆರೆ ಅಂಗಳದ ಮುನಿಯಮ್ಮ ಬೆಳಿಗ್ಗೆ ಎದ್ದು ಕಸ ಹೊಡೆದು ರಂಗೋಲಿ ಸಾರಿಸಿ



ಉಶ್ ಉಶ್ ಎಂದು ಉರಗ ಧ್ವನಿ ತರಂಗವನ್ನು ಸೂಸುತ್ತಿರಲು

ಎದುರುಗಡೆಯಿಂದ "ಬೇಡದಂತ ಕಸವು ತುಂಬಿದೆ ನಮ್ಮೂರ ಬೀದಿಯಲಿ" ಎಂದು ಅರಚಿಕೊಂಡು ಮಲ್ಲಣ್ಣ

ಡ್ರೈವ್ ಮಾಡಿಕೊಂಡು ಕಸದ ಗಾಡಿಯನ್ನು ತಗೊಂಡುಬಂದ.

ಮಲ್ಲಣ್ಣ ಮುನಿಯಮ್ಮ ನ ಕಂಡು

"ಹೋ ಏನಕ್ಕ ತುಂಬ ಚೆನಾಗಿ ತೀಡ್ತಿದಿಯೇ,ಯಾರಾರು ಬೀಗ್ರ್ ಬತ್ತಾರಾ ಹೇಂಗೆ?"

ಮುನಿಯಮ್ಮ:-ಅಯ್ಯೋ!ಊರೆಲ್ಲ ಆಪತ್ ಬಂದ್ ಚಾಪೆ ಸುತ್ಕೊಂಡ್ ಓಗ್ಬೇಕಾರೇ 

ಯಾ ನೆಂಟ್ರ್ ಬಂದ್ ಒಕ್ಕರಿಸ್ತಾರೋ ಮಲ್ಲೇಶಿ

 ಎಂದು ಬಾಯಲ್ಲಿದ್ದ ಕವಳವನ್ನು "ಪಿಚಕ್" ಎನಿಸಿದಳು.

ಮಲ್ಲಣ್ಣ:-ಹಿಂಗೆಲ್ಲ ರೋಡ್ಮೇಲೆ ಉಗಿಬಾರ್ದು ಕಣಕ್ಕೋ, ದಂಡ ಹಾಕ್ತಾರೆ ಛೇರ್ಮನ್ರು!


ಮುನಿಯಮ್ಮ:-ಆ ಛೇರ್ಮನ್ ಈ ಕಡೆ ಸುಳೀಲಿ ಬಡ್ಡಿಹೈದ್ ನ ಸೊಂಟ ಮುರಿತೀನಿ,ಅದೇನೋ

ಲಾಕ್ ಡೌನ್ ಅಂತೆ,ಊರೂರಲ್ಲಿ ಹೋಗಿ ಎಲ್ರಿಗೂ ರೇಶನ್ ಕೊಡ್ತೌರೆ ದೊಡ್ಮಂದಿ,ಊರಿಗೆ 

ಹಿರಿಯ ಅನ್ನಿಸ್ಕೊಂಡ್ನಿವನು ಬರೀ ಸೆಟಪ್ಗಳಿಗೆ ತಗೊಂಡ್ ಕೊಡೋದಾಯ್ತು ರೇಶನ್ನ,ಓಟ್ ತತ್ತಾ ಅಂತ ಬರ್ಲಿ

ಉರಳಾಡಿಸ್ಕೋಂಡ್ ಹೊಡಿತೀನಿ

ಮಲ್ಲಣ್ಣ:-ಅದ್ಸರಿ,ನಿನ್ ಗಂಡ ಎಲ್ಲೌನೆ?

ಪರಮೇಶಿ:-ಲೇ,ಮಲ್ಲೇಶಿ ಮೋದಿ ಏನಾರ ದುಡ್ ಹಾಕೌನೇನೋ?ಹೋದ್ಸಲ ಗೀಟಿದ್ದೆ ಎರಡ್ಸಾವರ ಅದ್ರಿಂದ ಪೇಟೆಗೋಗ್ಬಂದ್ ಎಣ್ಣೆ ತಗಂಡ ಮಾರಿದ್ಕೆ ಚೂರು ಗೀಟ್ತು!

ಮಲ್ಲಣ್ಣ:-ಹೂಂ,ಕಣ ಈ ಸಲ ರೇಟ್ ಕಮ್ಮಿ ಮಾಡ್ಕೋ,ಎಷ್ಟಂದ್ರು ನಾ ನಿಮ್ ಜನ ಅಲ್ವೇ?

ಪರಮೇಶಿ:-ಲೇ ಬಡ್ಡೇತದೆ,ಈ ರೋಗ ಬಡ್ಕೊಂಡ್ರೆ ಹೆಂಡ್ರೆ ಪಕಕ್ ಮಲ್ಗಲ್ಲ ಕಣ ಇನ್ ಇಂತ ಡವ್ ಎಲ್ಲ

ಕೊರೋನಾಗಿಂತ ಮುಂಚೆ ಅಷ್ಟೇ!ನೋ ಎಮೋಸನ್ಸ್,ನೋ ಎಮೋಸನ್ಸ್

ಮಲ್ಲಣ್ಣ:-ಆಯ್ತು ಬಿಡಪ್ಪ,ಎಲ್ಹೋಂಟೆ ಅಲ್ ಮಾಮಂದ್ರಿರಾದರೆ ಈ ಅವತಾರದ ಮೇಲ್ಹೋದ್ರೆ ಕುಂಡೆ ಮೇಲೆ

ಬರೆ ಬೀಳ್ತಾವಷ್ಟೇ

ಪರಮೇಶಿ:-ಇಲ್ ನೋಡು,ಇದಾ ಪಂಚೆ ಹಿಂಗ್ ಹಿಡ್ಕಂಡ್ ಬಿಡದಪ್ಪ ಪೋಲಿಸಪ್ಪ ಬಂದ್ರೆ, ಅವನು ಯಾಕ್ಲಾ ತಿರಗ್ತಿದ್ದಿ?ಅಂದ್ರೆ ಮಾಸ್ಕ್ ತರೋಕ್ ಹೊಂಟಿವ್ನಿ ಅನ್ನೋದಪ್ಪ.


ಮಲ್ಲಣ್ಣ:-ಬಲ್ ಮಗ ನೀನು,ಅಷ್ಟಿಲ್ದೆ ಮಡಗ್ದಾ ಶೆಟ್ರಿಗ್ ನಾಮವಾ?

ಪರಮೇಶಿ:-ಶೆಟ್ರಿಗ್ ಏನಾಯ್ತಲಾ?ಮೊನ್ನೆ ಮೊನ್ನೆ ಚೆನ್ನಾಗೇ ಇದ್ರು.

ಮಲ್ಲಣ್ಣ:-ಆಯಪ್ಪ ಮೂರ್ ಹೊತ್ತು ಸಾನಿಟೈಸರ್ ಎಣ್ಣೆನ ಗೋಮುತ್ರದ ಥರ

ಎರಚ್ತಾ ಇತ್ತು ಬಂದ್ ಹೋದೋರ್ ಮೇಲೆಲ್ಲ,ಮೊನ್ನೆ ಆ ಸಾವಿತ್ರಿ ನುಲೀತ ಬಂದ್ಲಂತೆ

ಈಯಪ್ಪನ್ ಕೈ ಹಿಡದ್ಲಂತೆ ಈ ಯಪ್ಪ ಗಾಬ್ರಿಯಿಂದ ಸಾನಿಟೈಸರ್ ಎಣ್ಣೆನ ಅವಳ ಕೈಗೆ ಹೊಡೆಯೋದ್

ಬಿಟ್ ಮುಖದ ಮೇಲೆ ಸೀತ್ಬಿಟ್ಲಂತೆ ಕಣ್ಲಾ,ಅದಕ್ಕೆ ಆ ಯಪ್ಪ ಎದೆ ಒಡ್ಕಂಡ್ ತಲೆ ತಿರುಗಿ ಬಿದ್ದಿದ್ ಇನ್ನೂ ಎದ್ದಿಲ್ಲ.

ಪರಮೇಶಿ:-ಬಡ್ಡಿಮಗ,ನಮ್ಕಡೆ ಜೀತ್ಕಬಿದ್ದು ವಸೂಲಿ ಮಾಡಿದ್ದ ಹಣನ,ಗಂಡ್ಸತ್ ಮುಂಡೆ ಸಾವಿತ್ರಿ ಅಂದ್ರೆ ಮಗನ್

ಮೈಯೆಲ್ಲ ನೀರಾಗೋದು ಸಾಯ್ಲಿಬಿಡು.

ಮಲ್ಲೇಶಿ:-ನೀ ಏನರ ಇಣುಕಿದ್ದಾ ಅಂಗಡಿಗೆ?ಅವನ್ ಕಫ ಏನೋ ಪರೀಕ್ಷೆ ಮಾಡೋಕ್ ತಗೊಂಡೋರಂತಪ್ಪ ಪಟ್ಣದ್

ಆಸ್ಪತ್ರೆಗೆ ಓಯ್ದೋರೆ,ನಾವೇನಾರೂ ಅವನ ಅಂಗಡಿಗೆ ಎರಡು ಮೂರು ದಿನದ ಅಂತರದಲ್ಲಿ ಹೋಗಿದ್ರೆ ನಮ್ನು ಪರೀಕ್ಷೆ ಮಾಡ್ತಾರೆ.

ಪರಮೇಶಿ:-ಒಂದ್ವೇಳೆ ರೋಗ ನಮ್ಗೂ ಬಂದಿದ್ ದಿಟ ಆದ್ರೆ ಹೆಂಗ್ಲಾ ಎಣ್ಣೆ ಹೊಡ್ಯೋದು?ನಾ ಅಂತೂ ಹೋಗಿಲ್ಲ ಅಂತೀನಪ್ಪ

ಮಲ್ಲೇಶಿ:- ನಾನೂ ಅಷ್ಟೇಯ!


ಪರಮೇಶಿ ತನ್ನ ಸ್ನೇಹಿತ ಪರಂಧಾಮನೊಂದಿಗೆ ಅರಳಿಕಟ್ಟೆ ಮೇಲೆ ಕುಳಿತುಕೊಂಡಿದ್ದಾನೆ

ಪರಮೇಶಿ:-ಲೇ,ಪರಮ ಬೀಡಿ ತತ್ತಾಲ

ಪರಮ:-ಕಚ್ಬುಟ್ಟಿದೀನಿ ಕಣ್ಲಾ

ಪರಮೇಶಿ:-ಲೇ ಒಂದೇ ಲೋಟ್ದಲ್ ಎಣ್ಣೆ ಕುಡ್ದೋರಿಗೆ,ಒಂದೇ ಹುಡ್ಗಿಗೆ ಕಾಳ್ ಹಾಕ್ದೋರಿಗೆ ಇದೆಲ್ಲ

ಮ್ಯಾಟ್ರೆನ್ಲಾ ತತ್ತಾಲಾ ಬಡ್ಡಿ ಹೈದ್ನೆ

ಪರಮ:-ಅಲ ಕಣ್ಲಾ ನಂಗ್ ಕೆಮ್ಮು...

ಪರಮೇಶಿ:-ಏ ಬಿಡ್ಲಾ, ಕೋಡೆರಮ್ ಹೊಡಿ,ಕಮ್ಮಿ ಆಗ್ಲಿಲ ಅಂದ್ರೆ ನಮ್ ಗೋವಿಂದ ಇದಾನಲ್ಲ

ಅವನ ಕರ್ದು ಮದ್ ತಗೊಂಡ್ರಾಯ್ತು.

ಪರಮ:-ಹೇ ಅವ ಬ್ಯಾಡಲೆ,ಮೊನ್ನೆ ಅವನ ಮಾತ್ರೆ ತಗೊಂಡ್ ಪಂಚಾಯ್ತಿ ಮಾದಪ್ಪ ನೆಗದ್ಬಿದ್ದ ಗೊತ್ತಾ?

ಪರಮೇಶಿ:-ಹೇ ಇಲ್ಲ ಅದಕ್ಕಲ್ಲ ಅದು ಈ ಸಲ ಅವರ ಮನೇಲಿ ಮಾರಿಗೆ ಕೋಳಿ ಇಟ್ಟಿಲಲ್ಲ ಅದಕ್ಕೆ.


ಅಷ್ಟೊತ್ತಿಗೆ ಪಕ್ಕದ ತೋಟಕ್ಕೆ ಹಾಕಿದ್ದ ತಾಡ್ಪಲ್ "ಚರ್,ಚರ್" ಎಂದು ಮುಂದೆ ಬಂದಿತು,ಅದನ್ನ ನೋಡಿ ಕಾಡಾನೆ ಬಂತಾ,ಕಾಡೆಮ್ಮೆ ಬಂತಾ ಎಂದು ಇಬ್ರು ಗಾಬರಿ ಬಿದ್ದು ಕಿರಚ್ತಾ ಇದ್ರು.

ಆಗ ತಾಡ್ಪಲ್ ನೊಂದಿಗೆ ಮಾರ ಮುಕ್ಕುರಿಸಿ ಬಿದ್ದ.

ಪರಮೇಶಿ:-ಥೂ ನಿನ್ ಮನೆ ಕಾಯ್ವಾನ,ನಾ ಆನೆ ಅನ್ಕೊಂಡ್ನಲ್ಲಲ

ಮಾರ:-ಇಲ್ಲ ಪರಮಣ್ಣ,ಬಾವಿಗೆ ಹಾಕೋಕೆ ತಗೊಂಡೋಂಟೆ ಇದನ್ನ(ಮುಗುಳ್ನಗೆ)

ಪರಮೇಶಿ:-ಅದ್ಯಾಕಲ?

ಮಾರ:-ನನ್ ಹೆಂಡ್ರು,ಮಕ್ಳು ಅದೇನೋ ವಾಟ್ಸೊಪ್ಪಲ್ಲಿ ಮೋದಿ ಮೇಲಿಂದ ಹೆಲಿಕ್ಯಾಪ್ಟರ್ ಅಲ್ಲಿ ಬಂದು

ಮದ್ ಹಾಕಿ ಹೋಕ್ತಾನೆ ಬಾವಿ ಮುಚ್ಚೋಕೆ ತಾಡ್ಪಲ್ ತಕ್ಬನ್ನಿ ಅಂತ ಅಂದ್ರಣ ಅದ್ಕೆ ಬಂದೆ.

ಪರಮೇಶಿ:-ಇನ್ನೇನ್ ಮಾಡ್ತಾನ್ಲೆ ಆವಯ್ಯ,ನೋಟಲ್ ಚಿಪ್ ಇಟ್,ಲಾಕ್ ಡೌನ್ ಮಾಡಿ ಕೈಯಲ್ ಚಿಪ್ ಕೊಟ್ಟ

ಅವ ಕೋಡೋ ಎರಡ್ ಸಾವಿರ ಎರಡು ಕೇಸ್ ರಮ್ ಗಾಯ್ತು ಆಟೆಯಾ.

ಪರಮ:-ಏನೇ ಹೇಳುಲಾ,ಕ್ಯಾಮೆ ಇಲ್ದೆ ಅವಂಗೆ ಬೈಕೊಂಡು,ಬರ್ಕೊಂಡು ನಮ್ ವಾಸ್ನೆ ಉದ್ಧಾರ ಆಗ್ಬುಟ್ಟ

ಪರಮೇಶಿ:-ಯಾರ್ಲಾ ವಾಸಣ್ಣನೇ,ಅದೇನೋ ಓದಿ ಬಂದು ಕೇರಿ ಹುಡ್ಗುರಿಗೆ ಕಂಪ್ಯೂಟ್ರು ಕೊಡ್ತೀನಿ ಅಂತ

ಚಂದಾ ಎತ್ತಿದ್ನಲ್ಲಲ,ಅವನ ನಂಬ್ಕೊಂಡ ಕೇರಿ ಹುಡ್ಗರಿಗೆ ಏನು ಗಿಟ್ಟಿಲ್ಲ ಅವ ಈಗ ಅಂತದೇ 

ಒಂದು ಹತ್ತಾರು ಕೇರಿ ಹುಡ್ಗರ ಸಂಘದ ನಾಯಕ ಕಣಪ್ಪ,ಈ ಸಲ ಅವಂಗೆ ಓಟ್ ಒತ್ತುವ ನಮ್ ಜನ ಅಲ್ವೆ ಏನಾರೂ 

ಚೂರು ಮಾಡಿ ಕೊಡ್ತಾನೆ.

ಮಾರ:-ಮೊನ್ನೆ ಗೌಡ್ರ ಮಗಂದ್ ಮದ್ವೆ ವಿಸ್ಯ ಗೊತ್ತಾ?

ಪರಮ:-ಇಲ್ಲ,ಹೇಳಪ್ಪ.

ಮಾರ:-ಅದೇ ಗೌಡ್ರ ರಿಲೇಸನಲ್ವಾ ತಹಸೀಲ್ದಾರು,ಅವರಿಗೆ ಏನೋ ಅವ್ಕಾಸ ಮಾಡ್ಕಂಟ್ರತ್ತಪೋ ಪೇಟೆ ಚೌಟ್ರಿಲಿ.

ಮದ್ವೆಗೆ ಬಂದೋರ್ ಮೇಲೆ ಪನ್ನೀರ್ ಹಾಕೋ ಬದ್ಲು ಸ್ಯಾನಿಟೈಸರ್ ಹಾಕ್ತಿದ್ರಂತೆ ಒಬ್ಬ ಸೀನಿದ್ದೆ ತಡ ಚೌಟ್ರಿ ಚೆಲ್ಲಾಪಿಲ್ಲಿ.

ಆಮೇಲೆ ಊಟದ್ಕಡೆನೂ ಹಂಗೆಯಾ,ಗೊಣ್ಣೆ ಸೀಟ್ಗೋಗ್ದು ಅದೇ ಕೈಲಿ ಹುಗ್ಗಿ ಬಡಸ್ತಿದ್ನಂತೆ ಸಣ್ಣ, ನೀರ್ ಹಾಕಿ ಕೈ ತೊಳ್ಕೋ ಅಂದಿದ್ಕೆ ನೀರ್ ಬದ್ಲು ಸ್ಯಾನಿಟೈಸರ್ ಹಾಕೊಂಡು ಬೂಂದಿಲಾಡು ಬಡಿಸಿದ್ಕೆ,ಊಟ ಆದ್ಮೇಲೆ ಜನ ಕಕ್ಕಿದ್ದೇ ಕಕ್ಕಿದ್ದು.

ಪರಮೇಶಿ:-ತಥ್ತರಿಕೇ

ಮಾರ:-ಹೂ, ಹುಡ್ಗಿ ಓದೌಳೆ ನೋಡಿ ಮದ್ವೆ ಗಂಡಿಗೆ ನೆಗಡಿ ಅಂತೆ ಅದಕ್ಕೆ ಇವತ್ ಪ್ರಸ್ಥ ಇದ್ರೂ ನಂಗ್ ಸಪ್ರೇಟ್ ಮಂಚ ಬೇಕು ಅಂತ ಹಠಕ್ಕೆ ಕೂತಿದ್ಲಂತೆ, ಪಿಪಿಇ ಕಿಟ್ ಹಾಕೊಂಡ್ ಹೋದ್ಲಂತಪ್ಪ ಕೋಣೆಗೆ ನನ್ ಹೆಂಡ್ರು ಹೇಳಿದ್ಲು.


ದೂರದಲ್ಲಿ ಟಂ ಟಂ ನಲ್ಲಿ ರೇಶನ್ ತಂದು ಹಂಚಲು ಜನನಾಯಕ ರಾಮಣ್ಣ ಮುಂದಾದ.

ಪರಮೇಶಿ:-ಅಲ್ನೋಡ್ರಲಾ ರೇಶನ್ನು,ಬನ್ರಲಾ ಹಂಗೆ ಎಲ್ರಿಗೂ ಹೇಳುವ

ಮಲ್ಲಣ್ಣ ಕೆಲಸ ಮುಗಿಸಿ ಬಂದವನೇ "ನೀ ಏನೇ ಹೇಳು ಪರಮೇಶಿ ಮೋದಿಗೆ ಕರೋನಾ ಕಂಟ್ರೋಲ್ ಮಾಡೋಕಾಗ್ತಿಲ್ಲ ಕಣ್ಲಾ" ಎನ್ನುತ್ತಾ ಜನಜಂಗುಳಿಯಲ್ಲಿ ನುಗ್ಗಿ ರಾಮಣ್ಣನ ಸೆಲ್ಫಿಗೆ ,ರೇಶನ್ನಿಗೆ ಹಲ್ಕಿರಿದು ಎರಡನ್ನೂ ಸ್ವೀಕರಿಸಿ ಎರಡು ಸಲ "ಆಕ್ಷಿ" ಆಕ್ಷಿ" ಎಂದು ಹೋದರು.


ಅಂಕಣ

ನಿಖಿಲ್‌ ಎ ಬಿ -ಮುಂಡಗೋಡ