Ticker

6/recent/ticker-posts

ದೇವರು" ಎನ್ನುವುದು ಈ ಸೃಷ್ಟಿಯ ಮೂಲ ಶಕ್ತಿಯ ಕುರಿತು ಹೇಳುವ ಒಂದು ಸಿದ್ಧಾಂತ.

 ಭಾರತದ ವೈದಿಕ ಪರಂಪರೆಯಲ್ಲಿ ದೇವ,ದೇವತೆ ಮತ್ತಿತರ ವ್ಯವಸ್ಥೆಯಲ್ಲಿ ಬದಲಾಗುವ ಸಾಧ್ಯಗಳಿವೆ,ಕಾರಣ "ದೇವರು" ಎನ್ನುವುದು ಈ ಸೃಷ್ಟಿಯ ಮೂಲ ಶಕ್ತಿಯ ಕುರಿತು ಹೇಳುವ ಒಂದು ಸಿದ್ಧಾಂತ.ಪ್ರಸ್ಥಾನ ತ್ರಯಗಳ ಕೊಡುಗೆಯಾದ ಮೂರು ಭಾರತೀಯ ಮತಗಳನ್ನು (ಅದ್ವೈತ,ವಿಶಿಷ್ಟಾದ್ವೈತ,ದ್ವೈತ)ಗಳನ್ನು ಪರಿಗಣಿಸಿದರೇ ಅವುಗಳು ಕೂಡ ನಿಲ್ಲುವಂತವಲ್ಲ ವೇದಾಂತ ಸಾಮ್ರಾಜ್ಯ ಯಾವತ್ತೂ ನಿಂತನೀರಲ್ಲ.

ಮುಂದೊಂದು ದಿನ ಹೊಸ ಸಿದ್ಧಾಂತಗಳು ಬಂದರೆ ಅದಕ್ಕೆ ಯಾವುದೇ ಆಶ್ಚರ್ಯಬೇಡ ನೇತಿ ನೇತಿ!



ಆದರೆ ಅವೈದಿಕ ದೈವಗಳು ಹಾಗಲ್ಲ,ಸದ್ಗುರುಗಳ ಮಾತು ನೆನಪಾಗುತ್ತೆ ನಿಮಗೆ ಒಳ್ಳೆಯ ಸಂಬಂಧ ಬೇಕೆಂದರೆ ಪೂರ್ಣ ಸತ್ತವರ ಜೊತೆ ಸಂಬಂಧ ಬೆಳೆಸಿ ಎನ್ನುವುದು. 

ಹಾಗೆ ನೋಡುವುದಾದರೆ ಇಂದು ನಾವು ಆರಾಧಿಸುವ ಅವೈದಿಕ ದೇವರುಗಳೆಲ್ಲ ಎಂದೋ ಸತ್ತು ನಮ್ಮ ತಲೆ ಕಾಯುತ್ತಿರುವ ಹಿರಿ ತಲೆಗಳು.

ಶ್ರಾದ್ಧಾದಿಗಳ ಆಚರಣೆ ಯಾವಾಗ ಬೆಳಕಿಗೆ ಬಂತೋ ಗೊತ್ತಿಲ್ಲ ಆದರೆ ಈ ರೀತಿ ಸತ್ತವರ ಆತ್ಮದ ಉನ್ನತ ಲೋಕದ ಪ್ರಯಾಣವಿರದೇ ಸತ್ತವರು ಸಮಾಜದಲ್ಲಿ ಮಹತ್ತರ ಬದಲಾವಣೆ ಮಾಡಿ ಸತ್ತರೆ ಅವರು ತಲೆಮಾರುಗಳ ತನಕ ಜೀವಂತವಾಗಿರುವ ಉದಾಹರಣೆಯಿದೆ!


ನಮ್ಮಲ್ಲಿ ಮಾರಿ ಇದ್ದಾಳೆ ಎಂದೋ ತನ್ನ ಗಂಡ ಮಾಡಿದ ತಪ್ಪಿಗೆ ಶಿಕ್ಷೆ ನೀಡಿ ಅವನ ಜೀವ ತೆಗೆದು ಸ್ತ್ರೀ ಸ್ವಾತಂತ್ರ್ಯದ ಪ್ರತೀಕವಾದವಳು, ಯುದ್ಧಾನಂತರ ಇನ್ನೊಬ್ಬರ ಸ್ವತ್ತಾಗದೇ ಗಂಡನ ಜೊತೆಯೇ ಚಿತೆ ಏರುವ ಮಾಸ್ತಿ(ಮಹಾಸತಿ)ಇದ್ದಾಳೆ ಆಳುಪರ ಕಾಲದಲ್ಲಿ ನಮ್ಮ ಜಿಲ್ಲೆಗೆ ಬಂದ ಯಕ್ಷ / ಯಕ್ಷಿಣಿಯರೂ         

ಹುಲಿಗೆ ಕೂಡ ಕಲ್ಲಿನ ದೈವದ ರೂಪ ಕೊಟ್ಟು ಆರಾಧಿಸುತ್ತೇವೆ.


ದೇವಾಂಗರ ಕುಲದೈವ ಚೌಡೇಶ್ವರಿ ಕೂಡ ವಿವಿಧ ಆಯಾಮದಲ್ಲಿ ವಾಸಿಸುತ್ತಿದ್ದಾಳೆ, ಪುರಾಣದಲ್ಲಿ ಬರುವ ಕಾಳಿಕಾಂಬಾ ಕರಿಯಮ್ಮಳಾದರೆ ದುರ್ಗೆಯನ್ನು ಸಹ ಗಾಳಿದುರ್ಗೆ ಎಂದು ಆರಾಧಿಸಿ 

ಕುರಿ ಕೋಳಿಯ ಬಲಿ ಕೊಟ್ಟು ಆರಾಧಿಸುತ್ತೇವೆ, ಒಬ್ಬ ಭೂತರಾಜ ಭಾವಿರುದ್ರನಾಗಿ ಬ್ರಾಹ್ಮಣರ ಕುಂಬಳಕಾಯಿ ಬಲಿ ಸ್ವೀಕರಿಸಿದರೆ ಅದೇ ಭೂತರಾಜನು ಭೂತಪ್ಪನಾಗಿ ಹಾನಗಲ್ಲಿನಲ್ಲಿ ಕುರಿ,ಕೋಳಿ ಬಲಿಗೆ ಒಲಿಯುತ್ತಾನೆ.


ಊರಿನ ರಕ್ಷಣೆ ಮಾಡುವ ಜಟಿಗನು ಉತ್ತರಕನ್ನಡದ ದಾರಿ ದಾರಿಯಲ್ಲಿ ದೈವವಾಗಿ ಸಿಗುತ್ತಾನೆ,ಭರಮದೇವರು ಎಂದು ಕರೆಯುವ ಆಗಿನ ಕಾಲದ ಪಾಳೇಗಾರನೋ ರಾಜನೋ ಅಥವಾ ತುಳುನಾಡಿನಾದ್ಯಂತ ಆಳಿದ ಆಳುಪನ ರಾಜನೋ ಆದ ಶಿವನ ಸ್ಥಾನಕ್ಕೇರಿಕದ ಬೆರ್ಮೆರ್ ಸಹ ನಮ್ಮ ಸಂಸ್ಕೃತಿಯ ಭಾಗ.


ಇನ್ನೂ ಶಿವಮೊಗ್ಗದಂತಹ ಮಲೆನಾಡಿನ ಕಾನನದಲ್ಲಿ ವಿದ್ಯಾಚೌಡೇಶ್ವರಿ,ನಾಗಚೌಡೇಶ್ವರಿ ಮುಂತಾದವರು ಮತ್ತೆ ದೇವರು ಮೈಮೇಲೆ ಆವಾಹನೆ ಆಗಿ ನುಡಿಕೊಡುವುದು ಸಾಮಾನ್ಯ. ನನ್ನ ಕುಲದೈವ ಚಂದ್ರಗುತ್ತಿ ರೇಣುಕಾ ಜನಪದರ ಬಾಯಲ್ಲಿ ಯಲ್ಲಮ್ಮ ಅವನ ಮಗ ಪರಶುರಾಮ ಇವರ ನಡುವೆ ಅಲ್ಲಿಯೇ ಕ್ಷೇತ್ರಪಾಲಕನಾಗಿ ಒಂದು ಕಾಲದಲ್ಲಿ ಸ್ತ್ರೀ ಪೀಡಕನಾಗಿ ಪರಶುರಾಮನಿಂದ ಶಪಿತನಾದ ಶೂಲದ ಬೀರಪ್ಪ ನಮಗೂ ಆರಾಧ್ಯ(ಬೇಡರ ವೇಶದ ಮಲ್ಲೇಶಿಯ ಕಥೆಯೂ ಇದೆ ರೀತಿಯದು)ಪರಶುರಾಮನ ತುಳುನಾಡಿನ ಸೃಷ್ಟಿ ಶುರುವಾಗುವುದೇ ನಮ್ಮ ಮನೆದೈವದ ಬೆಟ್ಟದ ಮೇಲಿಂದ ಎನ್ನುವುದು(ಪ್ರೇರಣೆ)ಸ್ಥಳ ಪುರಾಣ.

ಮಾರ್ತಾಂಡಭೈರವನಾದ ಮೈಲಾರಲಿಂಗನ ಕಾರ್ಣಿಕ,ಸರಪಳಿ ಪವಾಡ ನೋಡದವರು ವಿರಳ


ಅವಧೂತ ಪರಂಪರೆಯ ಶ್ರೀಧರರದೂ,ಸಕ್ರೈಬಲ್ ನ ವೆಂಕಟಾಚಲರದ್ದೂ,ಬಿಲಗೂರು ಬಿಂದುಮಾಧವರದ್ದೂ ಒಂದು ತೂಕವಾದರೆ ಮತ್ತೊಂದು ತೂಕ ಶರಣ ದಾಸ ಪರಂಪರೆಯದ್ದು 

ಭಕ್ತಿ ಪಂಥದ ರೂವಾರಿಗಳು ಅನುಗ್ರಹಿಸುವ ದೈವಗಳಾಗಿ ಬೆಳಿದಿದ್ದು ಆಶ್ಚರ್ಯ ಮತ್ತು ಅದೃಷ್ಟ ಎರಡನ್ನೂ ಅನುಭವಿಸುವ ಹಾಗೆ ಮಾಡಿದೆ.

ಶರೀಫರೂ,ಗೋವಿಂದರೂ ನಮಗೆ ಆರಾಧ್ಯರು.

ಇನ್ನು ಉತ್ತರ ಕರ್ನಾಟಕದುದ್ದಕ್ಕೂ ನಿಮಗೆ ಆಗಿಹೋದ ಸಾಧು ಸಂತರೂ ದೇವರಾಗಿ ನಮಗೆ ತಿದ್ದಿತೀಡುತ್ತಾರೆ ಮತ್ತೆ ಪವಾಡವನ್ನೂ ಮಾಡುತ್ತಾರೆ.

ಸಿದ್ಧಾರೂಡಜ್ಜ,ಗುರುನಾಥಾರೂಢಜ್ಜ,ನರಗುಂದದ ಅಜ್ಜ,ಗದಗ ಪುಟ್ಟರಾಜಜ್ಜ,ಹಾನಗಲ್ ಕುಮಾರಸ್ವಾಮಿಗಳು, ಪಂಚಾಕ್ಷರಿ ಅಜ್ಜ,ಉಳುವಿ ಚನ್ನ ಬಸವೇಶ್ವರ ಅಜ್ಜ,ಉಕ್ಕಡಗಾತ್ರಿ ಅಜ್ಜ,ಕೈವಾರ ತಾತಯ್ಯ ಇವರೆಲ್ಲ ಗುರುವಾಗಿ ದೇವರಾದವರು.


ಇನ್ನು ಪ್ರೇತಭಾದೆಯಿಂದ ಮುಕ್ತಿ ನೀಡುವ ಗುಗ್ಗಳ/ವೀರಗಾಸೆ ಪ್ರಿಯ ಶ್ರೀ ವೀರಭದ್ರ ಸ್ವಾಮಿಯ ಗುಡಿಗಳೂ ಕೂಡ ವೈದಿಕ/ಅವೈದಿಕವಾಗಿ ಆರಾಧಿಸಲ್ಪಡುತ್ತವೆ.

 ಕದರಪ್ಪ ಎಂದು ಹೆಸರಿರುವ ನನ್ನ ತಾಯಿಯ ಮನೆದೇವರ

ಮೂಲ ಹೆಸರು ನರಸಿಂಹ ನನ್ನ ಆರಾಧ್ಯ ದೈವ.

ಅಲ್ಲಿ ಒಳಗಡೆ ಶೋಡಷೋಪಚಾರ ಮಾಡಿದರೆ ನಾವು ಚಾಕರಿ ಎಂದು ಗೋವಿಂದ ಎಂದು ದೈವದ ಸೇವೆಯನ್ನು ಪ್ರಾಂಗಣದಲ್ಲಿ ಮಾಡುತ್ತೇವೆ.

ಬ್ರಾಹ್ಮಣರೂ ನಮಿಸುವ ಶ್ರೀಮಂತ ಸಂಸ್ಕಾರವಿದು.


ಇನ್ನೂ ಕೊಳ್ಳೇಗಾಲ,ಚಾಮರಾಜನಗರದ ಕಡೆ ಹೋದರೆ ಮಾದಪ್ಪನ ಪವಾಡ ದೊಡ್ಡದು.

ಹಾಗೆಯೇ ಮಾರೀರ ಮಸಣೇರ ಗಂಡ ಎಂದು ಕರೆಸಿಕೊಂಡು ಆಗಿನ ಕಾಲದ ಮಾರಣಾಂತಿಕ ರೋಗಕ್ಕೆ ಪರಿಹಾರ ವಿತ್ತ ಶಿವನವತಾರ ಸಿದ್ದಪ್ಪಾಜಿ ಧಾರ್ಮಿಕ ಕ್ರಾಂತಿಯ ರೂವಾರಿ ಮಂಟೇಸ್ವಾಮಿ ಈಗಲೂ ಅಲ್ಲಿ ದೇವರಾಗಿ ಪೂಜಿತರಾಗುತ್ತಿದ್ದಾರೆ.


ಪ್ರಾಣಿಗಳನ್ನೂ ಸಹ ಅಷ್ಟೇ "ಊರಿಗೊಬ್ಬ ಹನುಮ"ಎಂದು  ಪ್ರಾಣದೇವರನ್ನು ಸತ್ತ ಮಂಗಗಳಿಲ್ಲಿಯೂ ಕಂಡು ಅಲ್ಲಲ್ಲಿ ದೇವಸ್ಥಾನ ನಿರ್ಮಿಸುವುದು ನಮ್ಮ ಪದ್ಧತಿ.


ಈ ರೀತಿ ಶ್ರೀಮಂತ ಪರಂಪರೆಯು ಕರ್ನಾಟಕದ್ದುದ್ದಕ್ಕೂ ಇದ್ದು ನಂಬಿದವರ ತಲೆ ಕಾಯುತ್ತಾ ಬಂದಿದ್ದು ಅದು ಜಾನಪದ ದೈವಗಳ ಕೊಡುಗೆ ತುಳುನಾಡಿನ ದೈವಗಳು ಧರ್ಮದೈವಗಳಿಗೆ ಸಾಷ್ಟಾಂಗ ಮಾಡುತ್ತಾ ಅವರ ಧರ್ಮ ರಕ್ಷಣೆಯ ಶಕ್ತಿಗೆ ತಲೆ ಬಾಗುತ್ತಾ ನಮ್ಮ ಉಳಿದೆಡೆ ಭಾಗದ ದೈವ ದೇವರುಗಳನ್ನೂ ಸಹ ತಿಳಿದುಕೊಳ್ಳೋಣ ಇದು ಈ ಕಾಲದ ಅನಿವಾರ್ಯ ಮತ್ತೆ ಅವಶ್ಯಕತೆ.

ಅಂಕಣ - ನಿಖಿಲ್ ಎ.ಬಿ. _ ಮುಂಡಗೋಡ