ಯಾರು #ಬ್ರಾಹ್ಮಣ?
ಬ್ರಾಹ್ಮಣನ ಮಗನಾಗಿ ಹುಟ್ಟಿದವನು ಬ್ರಾಹ್ಮಣನಾ ?
ಅಲ್ಲ, ಅವನು ಬ್ರಾಹ್ಮಣ ಬಂಧು.
ಸಕಲ ವೇದ ಶಾಸ್ತ್ರಾದಿಗಳನ್ನು ಬಲ್ಲವನು ಬ್ರಾಹ್ಮಣನಾ ?
ಅಲ್ಲ, ಅವನು ಬಹುವಾಕ್.
ಪರಮಾತ್ಮನನ್ನು ತಿಳಿಯುವ ದಾರಿಯಲ್ಲಿ ಸಾಗಿ ಅದನ್ನು ಸಾಧಿಸಿದವನೇ "ಬ್ರಾಹ್ಮಣ".
ಮೌನ-ಅಮೌನಗಳನ್ನು ಸಂಪೂರ್ಣವಾಗಿ ಅರಿತವನು ಅಂದರೆ ಎಲ್ಲಿ ಮಾತು/ಸ್ವರ ಹೊರಡಬೇಕು? ಎಲ್ಲಿ ಮೌನ ವಹಿಸಬೇಕು? ಎಂದು ತಿಳಿದವನೇ ಬ್ರಾಹ್ಮಣ ಎಂದು ಬೃಹದಾರಣ್ಯಕ ಹೇಳುತ್ತದೆ.
ಇವುಗಳನ್ನ ಅಳವಡಿಸಿಕೊಳ್ಳುವುದೇ "ಬ್ರಾಹ್ಮಣ್ಯ".
"ಜನ್ಮಾನಾಂ ಜಾಯೇ ಜಂತುಃ ಕರ್ಮಾಣಾಂ ದ್ವಿಜಮುಚ್ಛ್ಯತೇ" ಎಂಬುದು ಸ್ಕಂದ ಪುರಾಣದ ವ್ಯಾಖ್ಯೆ.
ಅಂದರೆ ಜನ್ಮದಿಂದ ಮನುಷ್ಯ ಕೇವಲ ಮನುಷ್ಯ ಕರ್ಮದಿಂದ ಅವನು ಬ್ರಾಹ್ಮಣನಾಗಬಲ್ಲ ಎನ್ನುವುದು ತಾತ್ಪರ್ಯ.
ಸ್ಕಂದ ಪುರಾಣವನ್ನು ಪ್ರಮಾಣವಾಗಿ ತೆಗೆದುಕೊಳ್ಳದೇ ಇನ್ನಿತರ ಅಂದರೆ ನನ್ನ ಅಧ್ಯಯನಕ್ಕೆ ತಕ್ಕಂತೆ ಭಗವದ್ಗೀತೆಯನ್ನೊಮ್ಮೆ ನೋಡುವ.
ಗೀತೆಯ ನಾಲ್ಕನೇ ಅಧ್ಯಾಯವಾದ ಜ್ಞಾನಕರ್ಮಸಂನ್ಯಾಸಯೋಗದಲ್ಲಿ ಪರಮಾತ್ಮ ಶ್ರೀ ಕೃಷ್ಣನು:-ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ|
ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್||
ಬ್ರಾಹ್ಮಣ,ಕ್ಷತ್ರಿಯ,ವೈಶ್ಯ,ಶೂದ್ರ ಈ ನಾಲ್ಕು ವರ್ಣಗಳ ಸಮೂಹವನ್ನು ಗುಣ ಮತ್ತು ಕರ್ಮಗಳ ವಿಭಾಗದಿಂದ ನಾನೇ ಸೃಷ್ಟಿಸಿದ್ದೇನೆ. ಈ ಪ್ರಕಾರ ಆ ಸೃಷ್ಟಿರಚನಾದಿ ಕರ್ಮಗಳ ಕತ್ರೃನಾದರೂ ಅವಿನಾಶೀ ಪರಮೇಶ್ವರನಾದ ನನ್ನನ್ನು ಅಕರ್ತಾ ಎಂದೇ ನೀನು ತಿಳಿ.
ಇಲ್ಲಿ ಜಾತ ಎಂಬ ಯಾವ ಪದದ ಉಲ್ಲೇಖವೂ ಇಲ್ಲ ಅಥವಾ ಜನ್ಮದಿಂದ ಬಂದದ್ದು ಎಂದು ಸೂಚಿಸುವ ಯಾವ ಆಧಾರವೂ ಇಲ್ಲ.
ಅವರವರ ಗುಣ ಮತ್ತು ಕರ್ಮದ ಆಧಾರದ ಮೇಲೆ ಅವರವರ ವರ್ಣಗಳ ನಿರ್ಧಾರ ಎಂಬುದು ಇಲ್ಲಿ ಸ್ಪಷ್ಟ.
ನಂತರ ತನ್ನ ವಿಭೂತಿಯಲ್ಲೆಲ್ಲೂ ಅವನು ತನ್ನನ್ನು ಬ್ರಾಹ್ಮಣ ಎಂದು ಹೇಳಿಕೊಳ್ಳುವುದಿಲ್ಲ.
ಭೀಷ್ಮಾಚಾರ್ಯರು ಪಠಿಸಿದ ವಿಷ್ಣು ಸಹಸ್ರನಾಮದಲ್ಲಿ
ಬ್ರಹ್ಮಣ್ಯೋ ಬ್ರಹ್ಮಕೃದ್ಬ್ರಹ್ಮ ಬ್ರಹ್ಮಃ ಬ್ರಹ್ಮ ವಿವರ್ಧನಃ
ಬ್ರಹ್ಮವಿದ್ಬ್ರಾಹ್ಮಣೋ ಬ್ರಹ್ಮೀ ಬ್ರಹ್ಮಜ್ಞೋ ಬ್ರಾಹ್ಮಣಪ್ರಿಯಃ ಎನ್ನುವ ಉಲ್ಲೇಖ ಬಂದಿದ್ದು ಬನ್ನಂಜೆಯವರು ಇದಕ್ಕೆ ಬ್ರಾಹ್ಮಣ ಎಂದರೆ ಜನಿವಾರ ಹಾಕಿದವನಲ್ಲ ಪರಮಾತ್ಮನನ್ನು ವೇದ ಮತ್ತು ವೇಧ (ಪರಮಾತ್ಮ)ನನ್ನು ತಿಳಿದವನು ಎಂದು ಹೇಳುತ್ತಾರೆ.
ಪರಮಾತ್ಮ ಶ್ರೀ ಕೃಷ್ಣನು ಮೋಕ್ಷಸನ್ಯಾಂಸಯೋಗದಲ್ಲಿ ಬ್ರಾಹ್ಮಣತ್ವದ ಬಗ್ಗೆ ಹೀಗೆ ಹೇಳಿದ್ದಾನೆ.
ಬ್ರಾಹ್ಮಣಕ್ಷತ್ರಾಯವಿಶಾಂ ಶೂದ್ರಾಣಾಂ ಚ ಪರಂತಪ
ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ
ಅಂದರೆ ಎಲೈ ಪರಂತಪ(ಅರ್ಜುನ)ನೇ! ಬ್ರಾಹ್ಮಣ,ಕ್ಷತ್ರಿಯ,ವೈಶ್ಯ ಮತ್ತು ಶೂದ್ರ ಇವರ ಕರ್ಮಗಳು ಸ್ವಭಾವತಃ ಉತ್ಪನ್ನವಾದ ಗುಣಗಳಿಂದಾಗಿ ವಿಭಾಗಿಸಲಾಗಿದೆ.
ಮುಂದುವರೆದು
ಶಮೋ ದಮಸ್ತಪಃ ಶೌಚಂ ಕ್ಷಾಂತಿರಾರ್ಜವಮೇವ ಚ ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್
ಅಂತಃಕರಣದ ನಿಗ್ರಹ,ಇಂದ್ರಿಯಗಳ ಮೇಲೆ ಹತೋಟಿ,ಧರ್ಮಪಾಲನೆಗಾಗಿ ಕಷ್ಟ ಸಹಿಸುವುದು,ಒಳ ಹೊರಗೆ ಶುದ್ಧವಾಗಿರುವುದು,ಬೇರೆಯವರ ಅಪರಾಧಗಳನ್ನು ಕ್ಷಮಿಸುವುದು,ಮನಸ್ಸು,ಇಂದ್ರಿಯಗಳು ಮತ್ತು ಶರೀರವನ್ನು ಸರಳವಾಗಿರಿಸುವುದು,ವೇದ,ಶಾಸ್ತ್ರ ದೇವರು ಮತ್ತು ಪರಲೋಕಾದಿಗಳಲ್ಲಿ ಶೃದ್ಧೆಯನ್ನಿಡುವುದು,ವೇದಶಾಸ್ತ್ರಗಳ ಅಧ್ಯಯನ ಮತ್ತು ಅಧ್ಯಾಪನ ಮಾಡುವುದು,ಪರಮಾತ್ಮ ತತ್ತ್ವದ ಅನುಭವ ಪಡೆಯುವುದು ಇವೆಲ್ಲವೂ ಬ್ರಾಹ್ಮಣನ ಸ್ವಾಭಾವಿಕವಾದ ಕರ್ಮಗಳಾಗಿವೆ.ಎನ್ನುತ್ತಾನೆ
ಇದರ ಆಧಾರದ ಮೇಲೆ ಜೀವಿಸುವ ಎಷ್ಟು ಮಂದಿ ಬ್ರಾಹ್ಮಣರು ನಮ್ಮ ನಿಮ್ಮ ನಡುವೆ ಇದ್ದಾರೆ ಕರ್ಮದ ಫಲವನ್ನು ತ್ಯಾಗ ಮಾಡುವುದು ಸಾತ್ವಿಕ ಲಕ್ಷಣ ಎಂಬುದಾದರೆ ಆ ಸಾತ್ವಿಕತೆಯೇ ಬ್ರಾಹ್ಮಣನ ಗುಣಾದಿಗಳು,ನಾವ್ಯಾರೂ ನಮ್ಮ ಸತ್/ದುಃ ಕರ್ಮಗಳ ಫಲವನ್ನು ತ್ಯಜಿಸಲು ತಯಾರಿಲ್ಲ ಕನಿಷ್ಟ ಪಕ್ಷ ಪ್ರಯತ್ನಿಸುವುದಿಲ್ಲ ಎಂದ ಮೇಲೆ ಈ ಪಟ್ಟಕ್ಕೆ ಏರಲು ಯಾರಿಗೆ ಸಾಧ್ಯ.
"ಯಜ್ಞೋಪವೀತಂ ಪರಮ ಪವಿತ್ರಂ" ಎನ್ನುವುದು ಎಷ್ಟು ಸತ್ಯವೋ,ನೈಷ್ಠಿಕ ಕರ್ಮಾಚರಣೆ ಇರದೇ ಅದು ಇದ್ದು ಇಲ್ಲದ ಹಾಗೆ ಎನ್ನುವುದು ಅಷ್ಟೇ ಸತ್ಯ.
ನಾವೆಲ್ಲ ರೋಬೋ ನೋಡಿದ್ದೇವೆ ಇದೊಂದು ಸಾಫ್ಟ್ ವೇರ್ ಇದನ್ನ ತಮ್ಮ ಸ್ವಾರ್ಥಕ್ಕೆ ತಕ್ಕ ಹಾಗೆ ಬಳಿಸಿಕೊಳ್ಳುವ ಜನ ಎಲ್ಲೆಡೆಯೂ ಇದ್ದಾರೆ ಅವರು ಬ್ರಾಹ್ಮಣ ಜಾತಿಯವರೇ ಆಗಿರಲಿ, ಅನ್ಯರೇ ಆಗಿರಲಿ.
ಇಂತಹ ವ್ಯಾಖ್ಯಾನಗಳನ್ನು ಕಲುಷಿತಗೊಳಿಸುವ ಹಿರಣ್ಯಾಕ್ಷ,ಹಿರಣ್ಯಕಶ್ಯಪು,ರಾವಣಾದಿಗಳು ಹುಟ್ಟುತ್ತಲೇ ಇರುತ್ತಾರೆ.
ಹಾಗಂತ ಚೇತನ್ ನಂತಹ ವಿಚಾರವಾದಿಗಳು ಅವರನ್ನ ಇಟ್ಟುಕೊಂಡು ಇಂತಹ ಶಬ್ದಗಳನ್ನ ಬೈದರೆ ಅವರಿಗೆ ಏನು ಸರಿಯಾಗುವುದಿಲ್ಲ.ಈ ಮನಸ್ಥಿತಿ ಎಲ್ಲೆಡೆಯೂ ಇರುತ್ತದೆ. ಕಾರಣ ಮೌಲ್ಯಗಳು ಹುಟ್ಟಿದ್ದು ಮನುಷ್ಯ ಪೂರ್ತಿಯಾಗಿ
ತನ್ನನ್ನು ತಾನು ಶುಚಿಗೊಳಿಸಿಕೊಂಡಾಗ;ಅನ್ಯಾಯ,ಅತ್ಯಾಚಾರ,ಕೊಲೆಗಳ ಪರಿಕಲ್ಪನೆಗಳು ತೀರ ಜೀವನಶೈಲಿಯಾಗಿದ್ದ
ಮನುಷ್ಯ "ಪ್ರಾಣಿ"ಗಳು ನಾವು, ಇದು ಎಲ್ಲರಲ್ಲೂ ಎಲ್ಲ ಜಾತಿಯಲ್ಲೂ ಕಾಮನ್! ಆ ರೀತಿ ನೋಡಿದರೆ ಖರ್ಗೆಯದೂ ಬ್ರಾಹ್ಮಣ್ಯವಾಗುತ್ತದೆ. ಒಂದೋ ಇಂತಹ ಸಾಫ್ಟ್ ವೇರ್ ಗಳ ಬಗ್ಗೆ ಹೀಗಿತ್ತು ಬ್ರಾಹಣ್ಯ ಇದೇ ನಿಜವಾದ ಬ್ರಾಹ್ಮಣ್ಯ ಎಂದು ಜನರಿಗೆ ಸರಿಯಾಗಿ ತಿಳಿಸಬೇಕು ಇಲ್ಲವೇ
ನಾಗರಿಕತೆ ಈ ಹಂತದಲ್ಲಿ ಸೋತಿದೆ ಎಂದು ಜಾತಿ ವ್ಯವಸ್ಥೆಯನ್ನು ಬಿಟ್ಟುಬಿಡಬೇಕು.
ನಮ್ಮ ನೇತಾರರೆನಿಸಿಕೊಂಡವರ ಕೊಡುಗೆಯೂ ಜಾತಿ ಉಳಿಸುವಲ್ಲಿ ಇದೆ ಒಂದು ಕಡೆ ದಲಿತರಿಗೆ ಮಂದಿರ ನಿರ್ಮಿಸಿದವರು ಎತ್ತರಕ್ಕೆ ಏರಿದರೆ, ಆ ಕೇರಿಯಲ್ಲೇ ಜನರನ್ನು ಉಳಿಸಿ "ಆಜನ" "ಈಜನ" ಎಂದು ಟ್ಯಾಗ್ ಲೈನ್
ಕೊಟ್ಟರು ಸಾಕುನಾಯಿಗಳ ಥರ ನಮ್ಮನ್ನು ಮಾಡಿದ ಮತ್ತೊಬ್ಬ ನಾಯಕನು ದಲಿತರಿಗೆ ಶಾಪವಾಗೇ ಉಳಿದಿದ್ದಾರೆ.
ಈ "ದಲಿತ" ಎಂಬ ಪದವೂ ಮುರಿದ ,ಶಿಥಿಲಗೊಂಡ ಎಂಬ ಅರ್ಥ ಕೊಡುವುದು ಇದನ್ನ ಹಿರಣ್ಯಕಶ್ಶಿಪುವಿನ ಕುರಿತು
ಹೇಳುವ ಮಾತಾಗಿದ್ದು ಇದು ನರಸಿಂಹ ಸಹಸ್ರನಾಮದಲ್ಲಿ ಮೊದಲಿಗೆ ಕೇಳಿ ಬರುತ್ತದೆ.ಇಂತಹ ಅಪಸವ್ಯದ ಟ್ಯಾಗ್ ಲೈನ್
ಅನ್ನೇ ಜಾತಿಗೆ ಇಟ್ಟು ಅವರನ್ನು ಅದೇ ಸ್ಥಿತಿಯಲ್ಲಿಟ್ಟ ಎಲ್ಲ ರೀತಿಯ ವ್ಯವಸ್ಥೆಗೆ ಒಂದು ಶೃದ್ಧಾಂಜಲಿ!
ಈಗಿರುವ ಜಾತಿಗಳನ್ನು ಹಳಿದು ಅದನ್ನು ಮೆಟ್ಟಲು ಮಾಡಿಕೊಂಡು ಮೇಲೆರಬಹುದೆ ಹೊರತು ಆ ಮೇಲಿರದವನು ಕೂಡ
ಕೆಳಗಿದ್ದವನನ್ನು ಸಾರಾ ಸಗಟಾಗಿ ತುಳಿಯುತ್ತಾನೆ ಎನ್ನುವುದು ಕಟು ಸತ್ಯ.
ಕಮ್ಯೂನಲ್ ಚಿಂತನೆಗಳಿರುವವರು ಗಿಳಿಯ ವೇಷ ಧರಿಸಿಕೊಂಡು ಬರುವ ಗಿಡುಗಗಳಷ್ಟೇ! ಗಿಡುಗನ ಬಗ್ಗೆ ಕಥೆ ಕಟ್ಟಿ;
ರಂಜಿಸಿ ಗಿಳಿಗಳಿಗೆ ಚೂರು ತೃಪ್ತಿ ಕೊಟ್ಟು ಅವುಗಳ ಹಿಂಡನ್ನು ಅವು ಅದೇ ಕಥೆಗಳ ಅಮಲಿನಲ್ಲಿದ್ದಾಗ ಕಬಳಿಸುವುದೇ
ಈ ಕಮ್ಯೂನಲ್ ಗಿಡುಗಗಳ ಉದ್ದೇಶ!
ಈ ಪ್ರಾರಾಬ್ಧಗಳನ್ನೆಲ್ಲ ಕಳಚಿಕೊಂಡು ನಾವು ಕೃಷ್ಣನ ಕಣ್ಣಲ್ಲಿ ಈ ವರ್ಣ ವ್ಯವಸ್ಥೆಯನ್ನು ನೋಡಬೇಕು! ವೈಯಕ್ತಿಕವಾಗಿ
ನಾವು ಈ ರೀತಿ ಬದುಕಿದರೆ ಸಮಾಜದಲ್ಲಿ ಸ್ವಲ್ಪ ಪರಿವರ್ತನೆ ಮೂಡಬಹುದು!
ಪರಮಾತ್ಮ ಕೃಷ್ಣನ ಜೀವನ ನೋಡಿ;
ಪರಮಾತ್ಮನು ದನಗಾಹಿಗಳ ಹಿಂಡನ್ನು ಸೇರಿ ಶೂದ್ರನಾದರೆ,ಕೊಡು ಕೊಳ್ಳುವಿಕೆಯ ಪುಣ್ಯವಾದ ಪಾಠವನ್ನು ಗೋಪಿಕಾಸ್ತ್ರೀಯರಿಗೆ ಕಲಿಸಿ ವೈಶ್ಯನಾದ,ಬಾಲ್ಯದಿಂದಲೇ ಜನರ ರಕ್ಷಣೆಗೆ ಪೂತನಿ,ಶಟಕ,ತೃಣಾವರ್ತ,ಧೇನು,ಬಕ,ಕೇಶಿ,ಚಾಣೂರ,ಮುಷ್ಠಿಕ,ಕಂಸ ರನ್ನು ಕೊಂದ ಕ್ಷತ್ರಿಯನಾದರೆ ಗೀತೆಯನ್ನು ಭೋದಿಸಿದ ಗೀತಾಚಾರ್ಯನಾದ ಯೋಗೆಶ್ವರ ಕೃಷ್ಣ ಬ್ರಾಹ್ಮಣನಾದ ಈ ಸಂಸ್ಕಾರವನ್ನು ಕಲಿಸುವ ಪದ್ಧತಿ ಹಿಂದೂ ಸಮಾಜದಲ್ಲಿ ಬರಬೇಕೆ ವಿನಹಃ ನಾನು ಹುಟ್ಟಿನಿಂದ ಬ್ರಾಹ್ಮಣ ಅಥವಾ ಶೂದ್ರ ಎಂದುಕೊಳ್ಳುವ ಮನೋಭಾವ ಇರಬಾರದು.
ಒಂದು ಜೀವಿತದಲ್ಲಿ ಮನುಷ್ಯ ಹೊಂದುವ ಎಲ್ಲ
ಹಂತದ ವಿದ್ಯೆಯು ಇದಾಗಿರಬೇಕೆ ವಿನಹ
ನಮ್ಮನ್ನು ಒಡೆಯುವ ಗೋಡೆಯಾಗಬಾರದು.
ಅಂಕಣ - ನಿಖಿಲ್ ಎಬಿ
ಮುಂಡಗೋಡ
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು