Ticker

6/recent/ticker-posts

ಎಷ್ಟಾದರೂ ಕೃಷ್ಣ ಅವತಾರ ಪುರುಷ

     "ಏಕೋ ಏನೋ ನನ್ನ ಮನಸ್ಸು ನಶ್ವರವೆನ್ನಿಸುತ್ತಿದೆ. ವೃಂದಾವನದ ನಮ್ಮ ಭೇಟಿಯ ಸ್ಥಳದತ್ತ ನನ್ನ ಮನ ಸೆಳೆಯುತ್ತಿದೆ... ಆದರೆ ಏನು ಉಪಯೋಗ, ಅಲ್ಲಿ ಹೋದರೆ ಮತ್ತಷ್ಟು ನೋವೆ..!! ಇಂದಿಗೆ ನನ್ನ ಗೋಪಾಲ ಮಥುರೆಗೆ ಹೋಗಿ ಒಂದು ತಿಂಗಳು ಕಳೆಯಿತು." ಎಂದು ರಾಧೆ ಕೃಷ್ಣ ಬಿಟ್ಟು ಹೋದ ಕೊಳಲಿನತ್ತ ನೋಡಿದಳು. ಕಣ್ಣಂಚಿನಲ್ಲಿ ನೀರು ಜಾರಿತ್ತು...!

     ರಾಧೆ ಮತ್ತು ಕೃಷ್ಣ ಎನ್ನುವುದಕಿಂತ ರಾಧಾಕೃಷ್ಣ ಎಂದರೆ ಸೂಕ್ತ. ರಾಧೆಗೆ ಕೃಷ್ಣನೆಂದರೆ ಪ್ರಪಂಚ, ಸರ್ವಸ್ವ. ಎರಡು ಜೀವ ಒಂದೇ ಆತ್ಮ. ಆತನೇನಾದರು ತುಂಟ ಮಾತನಾಡಬೇಕು, ಈಕೆ ನಾಚಬೇಕು. ಆತ ಕೊಳಲನೂದುತ್ತಿರುವಾಗ ಈಕೆ ಅವನ ಎದೆಯನೊತ್ತಿ ಮಲಗಬೇಕು. ಅವನ ಕೊಳಲ ನಿನಾದವ ಕೇಳಿದ ರಾಧೆ ಪುಣ್ಯವಂತೆ. ಮನೆಯಲ್ಲಿನ ತನ್ನವರು ಎನ್ನಿಸಿಕೊಂಡವರ ಕ್ರೌರ್ಯವನ್ನು ಮರೆಯಲು ಮಾಧವನ ಸಾನ್ನಿಧ್ಯ ಬಯಸುತ್ತಿದ್ದಳಾಕೆ. ಮನೆಗೆ ಹೋದರೆ ಮತ್ತೆ ಅದೇ ಕ್ರೌರ್ಯ. ಬೆಂದ ಜೀವಕ್ಕೆ ಆಸರೆಯಾಗಿದ್ದ ಕೃಷ್ಣ.




     ಎಷ್ಟಾದರೂ ಕೃಷ್ಣ ಅವತಾರ ಪುರುಷ. ಕಂಸನ ವಧಿಸಿ ಧರ್ಮ ಸಂಸ್ಥಾಪನೆಗಾಗಿ ಮಥುರೆಗೆ ಹೊರಟು ನಿಂತ. ಹೊರಡುವ ಮುನ್ನ ರಾಧೆ ಕೃಷ್ಣರ ಭೇಟಿ. ರಾಧೆ ಕೃಷ್ಟರ ಎದೆಯ ಮೇಲೆ ಒರಗಿದಳು. ಮೆಲ್ಲನೆಯ ತಂಗಾಳಿ ತೂಗು ಮಂಚವನ್ನು ತೂಗುವಂತಿತ್ತು. ಆಕೆಗೆ ತನ್ನ ಇಷ್ಟು ದಿನದ ಪ್ರಾಣಸಖ ಬಿಟ್ಟು ಹೋಗುತ್ತಾನೆ ಎನ್ನುವ ವಿರಹ ವೇದನೆ. ಮನೆಯಲ್ಲಿನ ನೋವಿನ ಜೊತೆಗೆ ಇನ್ನು ಮುಂದೆ ಈತನೂ ಇರುವುದಿಲ್ಲ ಎನ್ನುವ ಸಂಕಟ ಆಕೆಗೆ ಉಸಿರು ಕಟ್ಟಿದ ಅನುಭೂತಿ ನೀಡುತಿತ್ತು. " ನನ್ನ ಆತ್ಮ ನೀನು, ನೀನೇ ಹೀಗೆ ಪರಿತಪಿಸಿದರೆ ನನಗಾದರು ಬಿಟ್ಟು ಹೋಗೋಕೆ ಆದೀತೆ ರಾಧೆ...!!!" ಎಂದು ಆಕೆಯ ಕಿವಿಯಲ್ಲಿ ಮೆಲ್ಲನೆ ನುಡಿದನು. ಆತನ ಕಣ್ಣಲ್ಲಿಯೂ ನೀರು. ಆಕೆಗಾಗಿ ಕೊಳಲನೂದಿದನು. ಇನ್ನು ಬೀಳ್ಕೊಡುಗೆ ಎಂದಾಗ ತನ್ನ ಕೊಳಲ ರಾಧೆಗೆ ಪ್ರೇಮದ ಕಾಣಿಕೆಯಾಗಿ ನೀಡಿದನು. "ಚಿಂತಿಸಬೇಡ ರಾಧೆ ನಾನು ಎಂದಂದಿಗು ನಿನ್ನಲ್ಲಿ ಇರುತ್ತೇನೆ...!" ಎಂದನು. ರಾಧೆ ಅತ್ತಳು..!!!

     ಮತ್ತೆ ಮನಯವರ ಕ್ರೌರ್ಯ. ಬಹುಶಃ ಭೃಗು ಮುನಿಯ ಶಾಪ ಕೆಲಸ ಮಾಡಿತ್ತು. ರಾಧಾಕೃಷ್ಣರನ್ನು ರಾಧೆ ಮತ್ತು ಕೃಷ್ಣರನ್ನಾಗಿ ಮಾಡಿತ್ತು. ಆಕೆಗೆ ತನ್ನ ಅಜ್ಜಿಯ ಬೆತ್ತದೇಟು ಬಿದ್ದಾಗ ಕೃಷ್ಣನ ನೆನೆದು ಸುಮ್ಮಾನಾಗಿ ಬಿಡುತ್ತಿದ್ದಳು. ಇವರು ಕೊಡುವ ಕಾಟ, ಮೋಹನನಿಲ್ಲವೆಂಬ ಸಂಕಟ, ಪದೇ ಪದೇ ಕೊಳಲನೊಪ್ಪಿ ಅತ್ತು ಸುಮ್ಮನಾಗಿ ಬಿಡುತ್ತಿದ್ದಳು. ಮೇಘಶ್ಯಾಮನೊಡನೆ ನಾ ಸಮಯ ಕಳೆದೆನಲ್ಲ ಎಂಬ ಮಾತು ಆಕೆಯನ್ನು ಸಮಾಧಾನಪಡಿಸುತಿತ್ತು.

    ಬಹುಶಃ ಆಕೆ ಕೃಷ್ಣ ಮತ್ತೆ ಬರುವನೆಂದು ಕಾದಳೇನೊ. ಎಂದಿಗೂ ಆಕೆ ಮನೆಯ ಮುಂದೆ ಕೂರುವುದು. ಒಮ್ಮೆ ಕೊಳಲಿನತ್ತ, ಒಮ್ಮೆ ದಾರಿಯತ್ತ... ಒಮ್ಮೆ ಕೊಳಲಿನತ್ತ, ಒಮ್ಮೆ ದಾರಿಯತ್ತ ನೋಡುತ್ತಿದ್ದಳು. ನೋಡುತ್ತಾ ನೋಡುತ್ತಾ ದೃಷ್ಟಿ ಇಂಗಿ ಹೋಯಿತು. ಕೃಷ್ಣ ಬರಲಿಲ್ಲ. ತೂಗು ಮಂಚ ಕೊನೆಗೂ ಖಾಲಿಯೇ ತೂಗಿತು. ಕೃಷ್ಣನ ಕೊಳಲಲ್ಲಿ ಮತ್ತೆ ಸ್ವರ ತುಂಬಲೇ ಇಲ್ಲ. ಕೊನೆಗೆ ರಾಧೆ ಕೃಷ್ಣನ ಆತ್ಮದಲ್ಲಿ ಐಕ್ಯಲಾದಳು... 


ಅಂಕಣ - 

ವಿಜೇತ್. ಎಸ್. ಕಾಮತ್ - ಮುಂಡಗೋಡ